

ಯಾದಗಿರಿ: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ನೌಕರರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದವನ ವಿರುದ್ದ ಎಫ್ಐಆರ್ ದಾಖಲಾಗಿದೆ.
ಹಣಕ್ಕೆ ಬೇಡಿಕೆ ಇಡುತ್ತಿದ್ದ ಮುರುಗಪ್ಪ ಗದಗನಲ್ಲು ಎಂದು ಗುರುತಿಸಲಾಗಿದೆ. ಈತನ ವಿರುದ್ಧವಾಗಿ ಯಾದಗಿರಿ ಜೆಸ್ಕಾಂ ಇಇ ರಾಘವೇಂದ್ರ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಾದಗಿರಿ ಎಸ್ಪಿ ಅರುಣ ಕುಮಾರ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮುರುಗಪ್ಪ ಫೋನ್ ಮಾಡುತ್ತಿದ್ದನು. ನಿಮ್ಮ ಮೇಲೆ ನಾಳೆ ಅಧಿಕಾರಿಗಳಿಂದ ದಾಳಿ ನಡೆಸುವ ಸಾಧ್ಯತೆ ಇದೆ, ತಲೆಮರೆಸಿಕೊಳ್ಳಿ ಎಂದು ನಾಜುಕಾಗಿ ಸಲಹೆ ನೀಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದನು.
ಹೀಗೆ ಸುಳ್ಳು ಹೇಳಿಕೊಂಡು ಕಳೆದ ಐದು ತಿಂಗಳ ಹಿಂದೆ ಯಾದಗಿರಿ ಜೆಸ್ಕಾಂ ಹಿರಿಯ ಅಧಿಕಾರಿ ರಾಘವೇಂದ್ರ ಬಳಿ ಐದು ಲಕ್ಷ ಹಣ ವಸೂಲಿ ಮಾಡಿದ್ದಾನೆ. ಇದೆ ನಾಟಕ ಮುಂದುವರೆಸಿದ್ದ ವಂಚಕ ಬೇರೆ, ಬೇರೆ ಹೆಸರಿನಲ್ಲಿ ಬೇರೆ ನಂಬರ್ನಿಂದ ಕಾಲ್ ಮಾಡಿ ರಾಯಚೂರು, ಕಲ್ಬುರ್ಗಿ, ಯಾದಗಿರಿ ಜಿಲ್ಲೆಯ ವಿವಿಧ ಅಧಿಕಾರಿಗಳ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ನಂತರ ಈ ಕುರಿತಾಗಿ ಪೊಲೀಸರಲ್ಲಿ ದೂರು ದಾಖಲಾಗುತ್ತಿದ್ದಂತೆ, ಕಳೆದ ಭಾರೀ ರಾಯಚೂರಿನಲ್ಲಿ ಅರೆಸ್ಟ್ ಆಗಿದ್ದನು. ಕೆಲ ದಿನಗಳ ಬಳಿಕ ಜಾಮೀನು ಮೇಲೆ ಹೊರಗೆ ಬಂದಿದ್ದಾನೆ. ಈಗ ಮತ್ತೆ ಈತನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ, ಸದ್ಯ ತಲೆ ಮರೆಸಿಕೊಂಡಿರುವ ಆರೋಪಿ ಮುರುಗಪ್ಪಗಾಗಿ ಯಾದಗಿರಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.