ವಿಮೆ ಪಡೆಯಲು ನಕಲಿ ಪಾಲಿಸಿ ಸಲ್ಲಿಸಿದ ಶಂಕೆ , ಪರಿಹಾರ ರದ್ದು| High court

High court
High court
Published on
ಬೆಂಗಳೂರು: ದಶಕಗಳ ಹಿಂದಿನ ಅಪಘಾತ ಪ್ರಕರಣವೊಂದರಲ್ಲಿ ಪರಿಹಾರ ಒದಗಿಸುವಂತೆ ನೀಡಿದ್ದ ಆದೇಶವನ್ನು ನಕಲಿ ವಿಮಾ ಪಾಲಿಸಿ ಸಲ್ಲಿಸಿ ಪಡೆಯಲಾಗಿದೆ ಎಂಬ ಅನುಮಾನದ ಮೇರೆಗೆ ಹೈಕೋರ್ಟ್​ ರದ್ದುಪಡಿಸಿದ್ದು, ಮರು ವಿಚಾರಣೆ ನಡೆಸುವಂತೆ ಆದೇಶಿಸಿದೆ.
2012ರ ಮೇ 19ರಂದು ಶಿಡ್ಲಘಟ್ಟ-ಚಿಂತಾಮಣಿ ರಸ್ತೆಯಲ್ಲಿ ಆಟೋವೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಇಬ್ಬರು ಸವಾರರು ಗಂಭೀರ ಗಾಯಗೊಂಡಿದ್ದರು. ಅವರಿಗೆ ಕ್ರಮವಾಗಿ 3.29 ಲಕ್ಷ ರೂ. ಮತ್ತು 68 ಸಾವಿರ ರೂ. ಪರಿಹಾರ ನೀಡುವಂತೆ ಬೆಂಗಳೂರಿನ ಮೋಟಾರು ಅಪಘಾತ ಹಕ್ಕುಗಳ ನ್ಯಾಯಾಧೀಕರಣವು ಭಾರತಿ ಆಕ್ಸಾ ಜನರಲ್​ ವಿಮಾ ಕಂಪನಿಗೆ 2015ರಲ್ಲಿ ಆದೇಶ ನೀಡಿತ್ತು. 
ಈ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅಪಘಾತಕ್ಕೆ ಕಾರಣವಾದ ಆಟೋರಿಕ್ಷಾಕ್ಕೆ ಕಂಪನಿಯು ಯಾವುದೇ ವಿಮಾ ಪಾಲಿಸಿ ನೀಡಿರಲಿಲ್ಲ ಎಂದು ಆಕ್ಷೇಪಣೆಗಳನ್ನು ಸಲ್ಲಿಸಿತ್ತು. 
ಕಂಪನಿ ಪರ ವಾದ ಮಂಡಿಸಿದ ವಕೀಲರು, ವಾಹನ ಮಾಲೀಕರು ಸಲ್ಲಿಸಿದ ವಿಮಾ ಪಾಲಿಸಿಯ ಜೆರಾಕ್ಸ್​ ಪ್ರತಿ ನಕಲಿಯಾಗಿವೆ. ಕಂಪನಿಯು ನೀಡುವ ಪಾಲಿಸಿಗಳಲ್ಲಿ ಕೇವಲ 8 ಅಂಕಿಗಳು ಇರುತ್ತದೆ. ಆದರೆ, ಪರಿಹಾರ ಪಡೆಯಲು ಸಲ್ಲಿಸಲಾಗಿದ್ದ ದಾಖಲೆಯಲ್ಲಿ 9 ಅಂಕಿಗಳಿವೆ. ಅಲ್ಲದೆ, ಮೂಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಆದ್ದರಿಂದ ಇದೊಂದು ನಕಲಿ ಪಾಲಿಸಿಯಾಗಿದೆ ಎಂದು ವಾದಿಸಿದರು.

ನೈಜತೆ ಪರಿಶೀಲಿಸದೆ ಆದೇಶ: 

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಮನ್ಮಥ ರಾವ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಮಾ ದಾಖಲೆಗಳ ನೈಜತೆಯನ್ನು ಪರಿಶೀಲಿಸದೆ ಪರಿಹಾರ ನೀಡುವಂತೆ ಆದೇಶಿಸಿಸಲಾಗಿದೆ ಎಂದು ಅಭಿಪ್ರಾಯಪಟ್ಟು, ಪರಿಹಾರದ ಆದೇಶವನ್ನು ರದ್ದುಪಡಿಸಿದೆ. ವಿಚಾರಣಾ ನ್ಯಾಯಾಧಿಕರಣಕ್ಕೆ ಪ್ರಕರಣವನ್ನು ಮರಳಿಸಿರುವ ನ್ಯಾಯಪೀಠ, ಎರಡೂ ಪಕ್ಷಗಳಿಗೆ ವಿಮಾ ಪಾಲಿಸಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಬೇಕು ಎಂದು ನಿರ್ದೇಶನ ನೀಡಿದೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ವಿಚಾರಣೆ ಮುಗಿಸಲು ಹೇಳಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net