

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಶೇಷ ಮಾನದಂಡವನ್ನು ಅನುಸರಿಸಿರುವ ರಾಜ್ಯ ಬಿಜೆಪಿ ಘಟಕವು ಮುಂದಿನ ವಾರ ಸಂಭಾವ್ಯ 150 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಇನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಅಭ್ಯರ್ಥಿಗಳ ನಕಲಿ ಪಟ್ಟಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳು ಸುದ್ದಿ ಪ್ರಕಟಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಆ್ಯಪ್ನಲ್ಲಿ ತಪ್ಪು ಮಾಹಿತಿ ಹರಿದಾಡುತ್ತಿದೆ. ಸುಳ್ಳು ಸುದ್ದಿ ಪ್ರಕಟಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.
ನಕಲಿ ಅಭ್ಯರ್ಥಿಗಳ ಪಟ್ಟಿ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೆಳ ಹಂತದಿಂದ ಅಭ್ಯರ್ಥಿ ಹಾಗೂ ಆಕಾಂಕ್ಷಿಗಳ ಮಾಹಿತಿ ಕಲೆ ಹಾಕಿದ್ದೇವೆ. ಜಿಲ್ಲಾ ಕೋರ್ ಕಮಿಟಿ ಸದಸ್ಯರಿಂದ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ. ನಾವು ಇನ್ನೂ ಚರ್ಚೆಯ ಹಂತದಲ್ಲಿದ್ದೇವೆ ಚರ್ಚೆಯ ನಂತರವೇ ಪಾರ್ಲಿಮೆಂಟರಿ ಬೋರ್ಡ್ಗೆ ಕಳಿಸೋದು.
ಅರುಣ್ ಸಿಂಗ್ ಹೆಸರಲ್ಲಿ ನಕಲಿ ಲಿಸ್ಟ್ ಮಾಡಿದ್ದಾರೆ ನಕಲಿ ಪಟ್ಟಿ ಇದು ನಂಬುವ ರೀತಿ ಲಿಸ್ಟ್ ರೆಡಿ ಮಾಡಿದ್ದಾರೆ. ಈ ಬಗ್ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ. ನನ್ನ ವಿಚಾರವಾಗಿಯೂ ಸುಳ್ಳು ಸುದ್ದಿ ಹಬ್ಬಿಸಿದ್ರು ಪತ್ರಿಕೆಯಲ್ಲಿ ಬಂದಿರುವ ರೀತಿ ಸುಳ್ಳು ಸುದ್ದಿ ಮಾಡಿ ಹಬ್ಬಿಸಿದ್ರು ನನಗೂ ವೀರಶೈವ ಲಿಂಗಾಯತ ಸಮುದಾಯದ ನಡುವೆ ಮನೆ ಮಗನ ರೀತಿ ಸಂಬಂದ ಇದೆ ದೂರು ಕೊಟ್ಟಿದ್ದೆ ಇಬ್ಬರನ್ನು ಪೊಲೀಸರು ಬಂಧಿಸಿದ್ಧಾರೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.
ನಮ್ಮ ಪಕ್ಷವು ಆಂತರಿಕ ಪ್ರಜಾಪ್ರಭುತ್ವವನ್ನು ಗೌರವಿಸಿ, ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಈ ಸಮಯದಲ್ಲಿ ಸುಳ್ಳು ಅಭ್ಯರ್ಥಿಗಳ ಪಟ್ಟಿ ಹರಿಬಿಟ್ಟು ಕುತ್ಸಿತ ಮನಸ್ಥಿತಿಗಳು ರಾಜ್ಯದ ಜನತೆಯ ದಾರಿ ತಪ್ಪಿಸುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಕಲಿ ಅಭ್ಯರ್ಥಿಗಳ ಪಟ್ಟಿ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.