ಸುಳ್ಳು ಸುದ್ದಿ ಎಂಬ ಸಾಂಕ್ರಾಮಿಕ ರೋಗ

edit 2
Published on

ನಾವು ಸಾಂಕ್ರಾಮಿಕ ರೋಗದ ವಿರುದ್ಧವಷ್ಟೆ ಹೋರಾಡುತ್ತಿಲ್ಲ. ಮಾಹಿತಿಸಾಂಕ್ರಾಮಿಕತೆ ವಿರುದ್ಧವೂ ಹೋರಾಡುತ್ತಿದ್ದೇವೆ. ಸುಳ್ಳು ಸುದ್ದಿಯು ವೈರಸ್​ಗಿಂತಲೂ ಹೆಚ್ಚು ಸುಲಭ ಹಾಗೂ ವೇಗವಾಗಿ ಹರಡುತ್ತದೆ. ಇದು ವೈರಸ್​ನಷ್ಟೇ ಅಪಾಯಕಾರಿಯಾದುದೂ ಹೌದು.

-ಟೆಡ್ರೊಸ್ ಅಭನಂ ಘಬ್ರಿಯೆಸಸ್

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಓ) ಮಹಾ ನಿರ್ದೇಶಕ

ಜಗತ್ತನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್ ರೋಗದ ವಿರುದ್ಧ ಇಡೀ ಮನುಕುಲ ಹೋರಾಡುತ್ತಿರುವ ಸಂದರ್ಭದಲ್ಲಿ ಜನತೆ ಸುಳ್ಳು ಸುದ್ದಿಯೆಂಬ ಇನ್ನೊಂದು ಬಗೆಯ ವೈರಾಣು ವಿರುದ್ಧ ಸಮರ ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ. ಡಿಜಿಟಲ್ ವೇದಿಕೆಗಳಲ್ಲಿ ಪ್ರಕಟವಾಗುವ ಮಾಹಿತಿ ಮಿಲಿಯಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ‘ಸುಳ್ಳು ಸುದ್ದಿ’ ಎಂಬ ಪದ ಬಹಳ ಸಮಯದಿಂದ ಬಳಕೆಯಲ್ಲಿದ್ದರೂ ಅದಕ್ಕೊಂದು ನಿಖರವಾದ ವ್ಯಾಖ್ಯಾನ ಇನ್ನೂ ರೂಪುಗೊಂಡಿಲ್ಲ. ಸರಳವಾಗಿ ಹೇಳುವುದಾದರೆ, ಸುಳ್ಳು ಅಥವಾ ತಪ್ಪು ದಾರಿಗೆಳೆಯುವ ಮಾಹಿತಿ ನೀಡುವ ಸುದ್ದಿಗಳೆಲ್ಲವೂ ಸುಳ್ಳು ಸುದ್ದಿ. ತಪ್ಪು ದಾರಿಗೆಳೆಯುವ ಸುದ್ದಿ, ಪರಿಶೀಲಿಸದ ಮಾಹಿತಿ, ವಂಚನೆ, ಇಂಟರ್​ನೆಟ್ ಮೆಮೆಗಳ ಸ್ವರೂಪದಲ್ಲಿ ಸುಳ್ಳು ಚಿತ್ರಗಳನ್ನು ರಚಿಸುವುದು ಇವೇ ಮೊದಲಾದವು ಸುಳ್ಳು ಸುದ್ದಿಯಲ್ಲಿ ಒಳಗೊಳ್ಳುತ್ತವೆ. ವ್ಯಾಪಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುವ ಇಂಥ ಮಾಹಿತಿ ಹಾಗೂ ಚಿತ್ರಗಳಿಗೆ ಸಾರ್ವಜನಿಕರು ಪಕ್ಕಾಗುತ್ತಿದ್ದಾರೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕ್ರಿಯೆ ಹೆಚ್ಚುತ್ತಿದ್ದು ಅದು ಎಷ್ಟು ಅಪಾಯಕಾರಿ ಎನ್ನುವುದಕ್ಕೆ ಗುಂಪು ಹತ್ಯೆ ಪ್ರಕರಣಗಳೇ ಸಾಕ್ಷಿ.

ಕೊವಿಡ್-19 ಬಿಕ್ಕಟ್ಟಿನ ನಡುವೆ ಹಬ್ಬಿದ ಸುಳ್ಳು ಸುದ್ದಿಯೇ ವಲಸೆ ಕಾರ್ವಿುಕರು ದೊಡ್ಡ ಪ್ರಮಾಣದಲ್ಲಿ ತಮ್ಮ ತವರೂರುಗಳಿಗೆ ತೆರಳಲು ಪ್ರೇರಣೆಯಾಯಿತು. ಲಾಕ್​ಡೌನ್ ಮೂರು ತಿಂಗಳಿಗೂ ಹೆಚ್ಚು ಕಾಲ ಮುಂದುವರಿಯಬಹುದೆಂಬ ಸುಳ್ಳು ಸುದ್ದಿ ಸೃಷ್ಟಿಸಿದ ಗಾಬರಿಯೇ ಇದಕ್ಕೆ ಕಾರಣ. ಇಂಥ ಸುಳ್ಳು ಸುದ್ದಿ ನಂಬಿ ಅದರ ಪ್ರಕಾರ ನಡೆದುಕೊಂಡ ಜನರ ಸಂಕಷ್ಟಗಳು ಹೇಳತೀರದಾಗಿದೆ. ಈ ಪ್ರಕ್ರಿಯೆಯಲ್ಲಿ ಕೆಲವರ ಮರಣವೂ ಸಂಭವಿಸಿದೆ.

ಸುಪ್ರೀಂ ಕೋರ್ಟ್ ನಿಲುವು: ಸುಳ್ಳು ಸುದ್ದಿಯು ವೈರಸ್​ಗಿಂತಲೂ ಹೆಚ್ಚು ಅಪಾಯಕಾರಿ ಆಗಬಲ್ಲದು ಎಂದು ಅಲಖ್ ಅಲೋಕ್ ಶ್ರೀವಾಸ್ತವ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿರುವುದು ಮಹತ್ವದ ಸಂಗತಿಯಾಗಿದೆ. ಕರೊನಾ ಸಾಂಕ್ರಾಮಿಕ ರೋಗದ ಕುರಿತ ಮುಕ್ತ ಸಂವಾದದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕೋರ್ಟ್ ಹೇಳಿತು. ಆದರೆ ವಿದ್ಯಮಾನಗಳ ಕುರಿತ ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸಬೇಕು ಎಂದು ಅದು ಮಾಧ್ಯಮಕ್ಕೆ ನಿರ್ದೇಶಿಸಿತು. ಮೂರೂ ಬಗೆಯ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕು. ಗಾಬರಿ ಹುಟ್ಟಿಸಲು ಸಾಧ್ಯತೆಯಿರುವ, ಪರಿಶೀಲಿಸದ ಸುದ್ದಿಗಳನ್ನು ಪ್ರಕಟಿಸಬಾರದು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಜನರ ಅನುಮಾನಗಳ್ನು ಬಗೆಹರಿಸುವ ನಿಟ್ಟಿನಲ್ಲಿ ಎಲ್ಲ ಮಾಧ್ಯಮದ ಮೂಲಕ ದೈನಿಕ ಬುಲೆಟಿನ್ ಪ್ರಕಟಣೆಗೆ ಕ್ರಮಕೈಗೊಳ್ಳುವಂತೆ ಕೂಡ ಅದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನಿಯಂತ್ರಣರಹಿತ ಇಂಟರ್​ನೆಟ್​ನಿಂದ ಹಾನಿ: ಹುಸಿ ಸುದ್ದಿ ಹೊಸ ಸಮಸ್ಯೆಯೇನೂ ಅಲ್ಲ. ಆದರೆ ಅದನ್ನು ನಿಯಂತ್ರಿಸುವುದೇ ಕಷ್ಟವಾಗಿದೆ. ಇಂಟರ್​ನೆಟ್ ವಾಕ್ ಸ್ವಾತಂತ್ರ್ಯದಷ್ಟೆ ಅದರ ನಿಯಂತ್ರಣ ಕೂಡ ಅಷ್ಟೆ ಮಹತ್ವವಾದುದು. ಇಂದಿನ ದಿನಮಾನದಲ್ಲಿ ಮಾಹಿತಿ ಸೃಷ್ಟಿಯ ವೇಗವನ್ನು ಪರಿಗಣಿಸಿದರೆ ಇಂಥ ಸುದ್ದಿಗಳನ್ನು ಮೊದಲೇ ಸೆನ್ಸಾರ್​ಶಿಪ್​ಗೆ ಒಳಪಡಿಸುವುದು ಕಷ್ಟವೇ ಅನಿಸುತ್ತದೆ. ಅಲ್ಲದೆ ಅದು ಸಂವಿಧಾನ ಖಾತರಿಪಡಿಸಿರುವ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯೂ ಆಗುತ್ತದೆ. ಏನೇ ಇರಲಿ, ನಿಯಂತ್ರಣರಹಿತ ಇಂಟರ್​ನೆಟ್ ಸಮಾಜಕ್ಕೆ ಸರಿಪಡಿಸಲಾಗದ ಹಾನಿ ಮಾಡುತ್ತದೆ.

ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳು ಹುಸಿ ಸುದ್ದಿ ಹರಡುವಲ್ಲಿ ಪ್ರಮುಖ ಸಾಧನವಾಗಿವೆ. ನೋಟು ಅಮಾನ್ಯೀಕರಣ ಸಂದರ್ಭದಲ್ಲಿ, ಕಪ್ಪುಹಣ ನಿಯಂತ್ರಣಕ್ಕಾಗಿ ಹೊಸ ಕರೆನ್ಸಿ ನೊಟುಗಳಲ್ಲಿ ಜಿಪಿಎಸ್ ಚಿಪ್​ಗಳು ಇರುತ್ತವೆ ಎಂಬ ಹಲವು ವೇದಿಕೆಗಳಲ್ಲಿನ ಊಹಾಪೋಹ ಜನರಲ್ಲಿ ಗಾಬರಿಯ ಅಲೆ ಸೃಷ್ಟಿಸಿತ್ತು. ಆದರೆ ರಿಸರ್ವ್ ಬ್ಯಾಂಕ್ ಅದಕ್ಕೆ ಸ್ಪಷ್ಟನೆ ನೀಡಿತು. ಇಂಥ ಹಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ 2018 ಏಪ್ರಿಲ್​ನಲ್ಲಿ ಮಾನ್ಯತೆ ಪಡೆದ ಪತ್ರಕರ್ತರಿಗೆ ಸಂಬಂಧಿಸಿದ ಮಾರ್ಗಸೂಚಿಗಳಲ್ಲಿ ಕೆಲವು ತಿದ್ದುಪಡಿ ತಂದಿತು. ಸುಳ್ಳು ಸುದ್ದಿ ವರದಿ ಮಾಡಿದ ಪತ್ರಕರ್ತರ ಪತ್ರಿಕಾ ಮಾನ್ಯತೆ ಅಮಾನತು ಮಾಡುವುದು ಅದರ ಉದ್ದೇಶವಾಗಿತ್ತು. ಆರೋಪಮುಕ್ತರಾದ ನಂತರ ಮತ್ತೆ ಅದನ್ನು ನೀಡಲಾಗುವುದೆಂದು ಸಚಿವಾಲಯ ಹೇಳಿತ್ತು. ಆದರೆ ಈ ನಿರ್ಬಂಧ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದು ದೇಶದಾದ್ಯಂತ ಪತ್ರಕರ್ತರು ಪ್ರತಿಭಟಿಸಿದ್ದರಿಂದ ಆ ಆದೇಶವನ್ನು ವಾಪಸ್ ಪಡೆಯಲಾಗಿತ್ತು.

‘ಆದೇಶಿತ ಭದ್ರತೆ’ಯು ಒಂದು ಸಾಂವಿಧಾನಿಕ ಮೌಲ್ಯ ಎಂದು ಉತ್ತರ ಪ್ರದೇಶ ಸರ್ಕಾರ ವರ್ಸಸ್ ಲಲಾಯ್ ಸಿಂಗ್ ಯಾದವ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ವಾಕ್ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆ ಪ್ರಶ್ನೆ ಬಂದಾಗ ಸಾರ್ವಜನಿಕ ಸುವ್ಯವಸ್ಥೆ ವಿಚಾರವೇ ಪ್ರಧಾನವಾಗುತ್ತದೆ. ಫೇಸ್​ಬುಕ್ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ, ಸಾಮಾಜಿಕ ಮಾಧ್ಯಮದ ದುರುಪಯೋಗದ ವಿಚಾರವನ್ನು ಸುಪ್ರೀಂ ಕೋರ್ಟ್ ಎತ್ತಿ ತೋರಿಸಿತ್ತು. ಪ್ರಕಟಿತ ಕೆಲವು ಮಾಹಿತಿಗಳು ಹಾನಿಕಾರಕವಾದುದು ಎಂಬುದನ್ನು ಗುರುತಿಸಿ ಅವುಗಳ ನಿಯಂತ್ರಣಕ್ಕೆ ಮಾರ್ಗಸೂಚಿ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ಯಾವುದೇ ಮಾಹಿತಿಯಾಗಲಿ; ಅದನ್ನು ನೋಡಿದ, ಓದಿದ, ಕೇಳಿದ ವ್ಯಕ್ತಿಗಳನ್ನು ನೀತಿಭ್ರಷ್ಟಗೊಳಿಸಬಹುದಾದಂಥ ಮಾಹಿತಿಗಳನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಪ್ರಸಾರ ಮಾಡುವವರನ್ನು ಶಿಕ್ಷಿಸಲು ಮಾಹಿತಿ ತಂತ್ರಜ್ಞಾನ ಕಾನೂನು-2000 ಇದರ ಸೆಕ್ಷನ್ 67 ಅವಕಾಶ ಕಲ್ಪಿಸುತ್ತದೆ. ಆದರೆ ಇಂಥ ಮಾಹಿತಿಗಳ ಮೂಲವನ್ನು ಕಂಡುಹಿಡಿಯುವುದೇ ದೊಡ್ಡ ಸವಾಲಾಗಿದೆ. ಹಿಂಸಾಚಾರ, ಯಾವುದೇ ವರ್ಗದ ಧಾರ್ವಿುಕ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಧಾರ್ವಿುಕ ಸ್ಥಳಗಳ ವಿರೂಪಕ್ಕೆ ಉದ್ದೇಶಪೂರ್ವಕ ಪ್ರಚೋದನೆ ನೀಡುವ, ಸಾರ್ವಜನಿಕರಲ್ಲಿ ಗಾಬರಿ ಆತಂಕ ಉಂಟುಮಾಡುವ ಹೇಳಿಕೆ, ಊಹಾಪೋಹ ಅಥವಾ ವರದಿಯ ಪ್ರಸಾರ- ಇಂಥ ಸಂದರ್ಭಗಳಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) 153, 295 ಮತ್ತು 505ನೇ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲು ಅವಕಾಶವಿದೆ. ಮಾನಹಾನಿ ಸಂದರ್ಭದಲ್ಲಿ 499 ಮತ್ತು 500ನೇ ಸೆಕ್ಷನ್ ಬಳಸಬಹುದು. ಆದರೆ ಸುಳ್ಳು ಸುದ್ದಿ ವಿಚಾರವನ್ನೇ ನಿರ್ವಹಿಸುವಂಥ ಒಂದು ಸಮಗ್ರ ಪ್ರತ್ಯೇಕ ಕಾನೂನು ಇಲ್ಲ.

ಸಾಂಕ್ರಾಮಿಕ ರೋಗದ ಸನ್ನಿವೇಶದಲ್ಲಿ ವ್ಯಾಧಿ ವಿಚಾರದಲ್ಲಿ ಗಾಬರಿ ಹುಟ್ಟಿಸುವಂಥ ಸುಳ್ಳು ಮಾಹಿತಿ ಹಬ್ಬಿಸುವವರಿಗೆ ಶಿಕ್ಷೆ ವಿಧಿಸಲು ಬಹುತೇಕವಾಗಿ 2005ರ ವಿಪತ್ತು ನಿರ್ವಹಣಾ ಕಾನೂನಿನ 54ನೇ ಸೆಕ್ಷನ್ ಅನ್ನು ಬಳಸಲಾಗುತ್ತದೆ. ಸರ್ಕಾರಿ ಅಧಿಕಾರಿ ಹೊರಡಿಸಿದ ಆಜ್ಞೆಗಳ ಉಲ್ಲಂಘನೆ ಮಾಡಿದವರನ್ನು ಐಪಿಸಿ ಸೆಕ್ಷನ್ 188ರ ಪ್ರಕಾರ ಶಿಕ್ಷೆಗೆ ಗುರಿಪಡಿಸಬಹುದು.

ಸಮಾಲೋಚನೆ: ಸುಳ್ಳು ಸುದ್ದಿ ಹಾವಳಿ ತಡೆಗೆ ಹಾಗೂ ನೈತಿಕ ಪತ್ರಿಕೋದ್ಯಮ ಎತ್ತಿಹಿಡಿಯುವ ಸಲುವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಪತ್ರಕರ್ತರೊಂದಿಗೆ ರ್ಚಚಿಸುತ್ತಿದೆ. ತಮ್ಮ ವೇದಿಕೆಗಳಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 2020 ಮಾರ್ಚ್ 20ರಂದು ಸಲಹೆ ಸೂಚನೆ ನೀಡಿದೆ. ಕರೊನಾ ವೈರಸ್ ಮಹಾಮಾರಿ ಬಗ್ಗೆ ಜನರಲ್ಲಿ ಗಾಬರಿ ಹುಟ್ಟಿಸುವಂಥ ಮಾಹಿತಿ-ಸಂದೇಶಗಳನ್ನು ಅಪ್​ಲೋಡ್/ಪ್ರಸಾರ ಮಾಡದಂತೆ ಬಳಕೆದಾರರಲ್ಲಿ ಜಾಗೃತಿ ಮೂಡಿಸಲು ಸೂಚಿಸಿರುವುದು ಒಂದು ಅಂಶವಾಗಿದೆ.

ಸುದ್ದಿಯನ್ನು ಮುಕ್ತವಾಗಿ ಪ್ರಕಟಿಸುವುದು ಸಂವಿಧಾನದ 19ನೇ ವಿಧಿಯ ಅವಿಭಾಜ್ಯ ಅಂಗವಾಗಿದೆ. ಹೆಚ್ಚುತ್ತಿರುವ ಮಾಧ್ಯಮ ಮತ್ತು ಇಂಟರ್​ನೆಟ್ ಬಳಕೆಯ ಈ ಕಾಲಘಟ್ಟದಲ್ಲಿ ಸಮಗ್ರ ಚಿತ್ರಣವನ್ನು ಪರಿಗಣನೆಗೆ ತೆಗೆದುಕೊಳ್ಳುವಂಥ ಒಂದು ಕಾನೂನನ್ನು ರಚಿಸುವುದು ಅಗತ್ಯವಾಗಿದೆ. ಸಿಂಗಾಪುರದ 2019ರ ಆನ್​ಲೈನ್ ಫಾಲ್ಸ್​ಹುಡ್ಸ್ ಅಂಡ್ ಮ್ಯಾನಿಪ್ಯುಲೇಶನ್ ಕಾನೂನನ್ನು ಈ ವಿಚಾರದಲ್ಲಿ ಮಾದರಿಯಾಗಿ ಪರಿಗಣಿಸಬಹುದು. ನ್ಯಾಯಾಂಗ, ಸರ್ಕಾರಗಳ ಹತ್ತು ಹಲವು ನಿರ್ದೇಶನ, ಸೂಚನೆಗಳ ಹೊರತಾಗಿಯೂ ಭಾರತದಲ್ಲಿ ಹುಸಿ ಸುದ್ದಿ ಹರಡುವ ಚಾಳಿ ಅವ್ಯಾಹತವಾಗಿ ಮುಂದುವರಿದಿದೆ. ಮಾಧ್ಯಮದಲ್ಲಿನ ತಪ್ಪು ಹಾಗೂ ಸುಳ್ಳು ಮಾಹಿತಿ ಒಂದು ಗಂಭೀರ ಸವಾಲಾಗಿದೆ. ಇಂಥ ಸುದ್ದಿಗಳು ರಾಷ್ಟ್ರೀಯ ಭದ್ರತೆ, ಜನಜೀವನ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಆರೋಗ್ಯಕ್ಕೆ ಅಪಾಯ ಒಡ್ಡುವಂತಿದ್ದರೆ ಅಗತ್ಯ ಕಾನೂನು ಕ್ರಮಕೈಗೊಳ್ಳುವುದು ಸಮಯದ ಅಗತ್ಯವಾಗಿದೆ.

(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net