

ಬೆಂಗಳೂರು: ಬಾಣಂತಿಯರ ಸಾವನ್ನು ತಡೆಯಲು ವಿಫಲರಾದ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಆಗ್ರಹಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಬಾಣಂತಿಯರ ಸಾವನ್ನು ತಡೆಯುವುದರಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಅವರು ರಾಜೀನಾಮೆ ಕೊಟ್ಟು ಮನೆಗೆ ವಾಪಸ್ ಹೋಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಲ್ಲಿವರೆಗೆ ಬಾಣಂತಿ ಸಾವಿನ ಸಂಬಂಧ ಒಬ್ಬರನ್ನೂ ಭೇಟಿ ಮಾಡಿ ಸಾಂತ್ವನ ಹೇಳಿಲ್ಲ; ಅವರು ಕೂಡ ರಾಜೀನಾಮೆ ಕೊಟ್ಟು ಮನೆಗೆ ವಾಪಸ್ ಹೋಗಬೇಕು ಎಂದು ಒತ್ತಾಯಿಸಿದರು.
ಬಾಣಂತಿಯರ ಸಾವನ್ನು ಸರ್ಕಾರ ನಿಲ್ಲಿಸದೆ ಇರುವುದನ್ನು ಖಂಡಿಸಿ ಇಡೀ ರಾಜ್ಯದಲ್ಲಿ, ಪ್ರತಿದಿನ 5 ಜಿಲ್ಲೆಗಳಲ್ಲಿ ರಾಜ್ಯ ಮಹಿಳಾ ಮೋರ್ಚಾ ಜಿಲ್ಲಾ ಘಟಕಗಳು ನಾಳೆಯಿಂದ (ಗುರುವಾರ) ಪ್ರತಿಭಟನೆ ನಡೆಸಲಿವೆ ಎಂದ ಅವರು, ಇದೊಂದು ಲಜ್ಜೆಗೆಟ್ಟ ಸರ್ಕಾರ, ಇಲ್ಲಿನವರೆಗೆ ಯಾವುದೇ ಸಚಿವರು ತೆರಳಿ ಭೇಟಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೃತ ಪ್ರತಿ ಬಾಣಂತಿಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು. ಮಕ್ಕಳನ್ನು ಈ ಸರಕಾರ ದತ್ತು ಸ್ವೀಕಾರ ಮಾಡಿ, ಅವರಿಗೆ ಆರ್ಥಿಕ- ಸಾಮಾಜಿಕ- ಶೈಕ್ಷಣಿಕ ಭದ್ರತೆಯನ್ನು ಕೊಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದರು.
ರಾಜ್ಯ ಸರ್ಕಾರವು ಹೊಸ ವರ್ಷದಲ್ಲಿ ರಾಜ್ಯದ ಮಹಿಳೆಯರಿಗೆ ಬಾಣಂತಿಯರ ಸಾವಿನ ಗ್ಯಾರಂಟಿಯನ್ನು ಕೊಟ್ಟಿದೆ ಎಂದು ಟೀಕಿಸಿದರು. ನಿನ್ನೆ ಕೊಪ್ಪಳದಲ್ಲಿ ಗರ್ಭಿಣಿ ಶ್ರೀಮತಿ ರೇಣುಕಾ ಹಿರೇಮನಿ ಎಂಬವರು ಸಾವನ್ನಪ್ಪಿದ್ದು, ಅವರು ಹೆರಿಗೆಗಾಗಿ ಬಂದಿದ್ದರು ಎಂದು ವಿವರಿಸಿದರು.
ಮೊದಲನೇ ಹೆರಿಗೆ ಸಂಬಂಧ ಕುಷ್ಟಗಿಗೆ ತವರು ಮನೆಗೆ ತೆರಳಿದ್ದ 23 ವರ್ಷದ ಅವರು, ಕುಷ್ಟಗಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕಳಿಸಿದ್ದರು. ಇದೊಂದು ಹೃದಯವಿದ್ರಾವಕ ಘಟನೆ. ನಾವೆಲ್ಲ ನೋವು ಅನುಭವಿಸುವಂತಾಗಿದೆ ಎಂದು ಸಿ.ಮಂಜುಳಾ ಬೇಸರ ವ್ಯಕ್ತಪಡಿಸಿದರು.