

ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನಮುಟ್ಟುವಂತಹ ಕೆಲ ಫೋಟೋಗಳು ವೈರಲ್ ಆಗಿತ್ತು. ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬ ದತ್ತು ತೆಗೆದುಕೊಂಡಿದ್ದ ಇಬ್ಬರು ಅನಾಥ ಸಹೋದರಿಯರಿಗೆ ತನ್ನ ಸ್ವಂತ ಹಣದಲ್ಲಿ ಹಿಂದು ಸಂಪ್ರದಾಯದಂತೆ ಮದುವೆ ಮಾಡಿದ್ದಾರೆಂದು ಫೋಟೋ ಕುರಿತು ಹೇಳಲಾಗಿತ್ತು. ಸಾಕಷ್ಟು ವೈರಲ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಅಂದಹಾಗೆ ಮುಸ್ಲಿಂ ವ್ಯಕ್ತಿಯನ್ನು ಬಾಬಾಭಾಯ್ ಪಠಾಣ್ ಎಂದು ಗುರುತಿಸಲಾಗಿದ್ದು, ಅಹ್ಮದ್ ನಗರದ ಇಬ್ಬರು ಅನಾಥ ಹೆಣ್ಣುಮಕ್ಕಳನ್ನು ದತ್ತು ಪಡೆದು ಹಿಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದಾರೆಂಬ ಸುದ್ದಿ ಸುಳ್ಳು ಎಂಬುದು ಫ್ಯಾಕ್ಟ್ಚೆಕ್ನಿಂದ ತಿಳಿದುಬಂದಿದೆ.
ಇಬ್ಬರು ಹೆಣ್ಣು ಮಕ್ಕಳನ್ನು ಗೌರಿ ಮತ್ತು ಸವಾರಿ ಎಂದು ಗುರುತಿಸಲಾಗಿದ್ದು, ಅವರಿಬ್ಬರು ಅನಾಥರಲ್ಲ. ಇಬ್ಬರು ಹೆಣ್ಣು ಮಕ್ಕಳ ಕುಟುಂಬ ಬಾಬಾಭಾಯ್ ಪಠಾಣ್ ವಾಸಿಸುವ ಏರಿಯಾದಲ್ಲಿ ವಾಸಿಸುತ್ತಿದ್ದು, ಪಠಾಣ್ ಅವರನ್ನು ತಮ್ಮ ಸ್ವಂತ ಸಹೋದರ ಎಂತಲೇ ಹೆಣ್ಣು ಮಕ್ಕಳ ತಾಯಿ ಭಾವಿಸಿದ್ದಾರೆ.
ಪ್ರಖ್ಯಾತ ಮರಾಠಿ ಬ್ಲಾಗರ್ ಸಮೀರ್ ಗಾಯ್ಕ್ವಾಡ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಈ ಹಿಂದೆಯೇ ಶೇರ್ ಮಾಡಿಕೊಂಡಿದ್ದಾರೆ. ಮರಾಠಿಯಲ್ಲಿ ಬರೆದುಕೊಂಡಿದ್ದು, ಅದರ ಸಾರಾಂಶ ಹೀಗಿದೆ. ಅಹ್ಮದ್ನಗರ ಜಿಲ್ಲೆಯ ಬೋಧೆಗಾಂವ್ ಗ್ರಾಮದ ಭುಸಾರಿ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಪಠಾಣ್ ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಮದುವೆ ನೆರವೇರಿಸಿಕೊಟ್ಟರು. ಇಬ್ಬರು ಹೆಣ್ಣುಮಕ್ಕಳ ತಾಯಿಗೆ ಸಹೋದರ ಇಲ್ಲದ ಕಾರಣ ಪಠಾಣ್ ಅವರನ್ನೇ ತನ್ನ ಸಹೋದರ ಎಂದು ಭಾವಿಸಿರುವ ಆಕೆ ಪ್ರತಿ ವರ್ಷ ತಪ್ಪದೇ ಪಠಾಣ್ಗೆ ರಾಕಿ ಕಟ್ಟುತ್ತಾರೆ. ಮದುವೆಯಲ್ಲಿ ಪಠಾಣ್ ಸಹೋದರ ಮತ್ತು ಚಿಕ್ಕಪ್ಪನ ಪಾತ್ರವನ್ನು ನಿರ್ವಹಿಸಿದ್ದಾರೆಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ನ್ಯೂಸ್ ಮೀಟರ್ ವೆಬ್ಸೈಟ್ ಗೂಗಲ್ ರಿವರ್ಸ್ ಸರ್ಚ್ ಇಂಜಿನ್ನಲ್ಲಿ ಫೋಟೋಗಳನ್ನು ಹುಡುಕಾಡಿದಾಗ ಸಮೀರ್ ಗಾಯ್ಕ್ವಾಡ್ ಬರೆದುಕೊಂಡಿರುವ ಯಥಾವತ್ ವರದಿ ಮಹಾರಾಷ್ಟ್ರದ ಸ್ಥಳೀಯ ವೆಬ್ಸೈಟ್ ಒಂದರಲ್ಲಿ ಪ್ರಕಟವಾಗಿದೆ. ಹೆಣ್ಣುಮಕ್ಕಳ ತಾಯಿ ಸವಿತಾ ಭುಸರಿಯನ್ನು ಆಕೆಯ ಗಂಡ ಹಲವು ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದಾನೆ. ಮದುವೆಗೆ ಕುಟುಂಬ ಸಂಕಷ್ಟದಲ್ಲಿರುವ ಸಮಯದಲ್ಲಿ ಚಿಕ್ಕಪ್ಪನ ಸ್ಥಾನದಲ್ಲಿ ನಿಂತ ಪಠಾಣ್, ಮದುವೆ ಮಾಡಿಕೊಟ್ಟಿದ್ದಾರೆ.
ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ಕುರಿತು ಹೇಳಿರುವುದು ಸುಳ್ಳಾದರೂ ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟ ಪಠಾಣ್ ಅವರ ಕಾರ್ಯ ನಿಜಕ್ಕೂ ಮನಮಿಡಿಯುವಂತಿದೆ. (ಏಜೆನ್ಸೀಸ್)