VIDEO| ಎನ್​ಆರ್​ಸಿ ವಿರೋಧಿ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಕಂಡುಬಂದು ದೃಶ್ಯ ಎಂದು ವೈರಲ್​ ಮಾಡಿರೋ ವಿಡಿಯೋ ಎಷ್ಟು ಸತ್ಯ?

NRC Protest
Published on

ನವದೆಹಲಿ: ಸಾವಿರಾರು ಜನರು ಬೀದಿಯೊಂದರಲ್ಲಿ ಸೇರಿರುವ ಏರಿಯಲ್​ ವಿಡಿಯೋ ಫೂಟೇಜ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್​ಪಿಆರ್​) ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಸ್ಲೀಮರು ನಡೆಸಿದ ಪ್ರತಿಭಟನಾ ಮೆರವಣಿಗೆ ಎಂದು ವಾದಿಸಲಾಗಿದೆ.

ಆದರೆ, ಇಂಡಿಯಾ ಟುಡೆ ಆ್ಯಂಟಿ ಫೇಕ್​ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ವಿಡಿಯೋ ಕುರಿತಾಗಿ ಮಂಡಿಸಿರುವ ವಾದ ತಪ್ಪು ಎಂದು ತಿಳಿದುಬಂದಿದೆ. ಅಸಲಿಗೆ ವಿಡಿಯೋ ದೆಹಲಿಗೆ ಸಂಬಂಧಿಸಿದ್ದೇ ಅಲ್ಲ. ಅಮೆರಿಕ ಸೇನಾಪಡೆ ನಡೆಸಿದ ಡ್ರೋನ್​ ದಾಳಿಯಲ್ಲಿ ಹತನಾದ ಇರಾನ್​ ಜನರಲ್​ ಖಾಸಿಂ ಸುಲೇಮಾನಿಗೆ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ. ಸುಲೇಮಾನಿ ಅಂತ್ಯಕ್ರಿಯೆಯಲ್ಲಿ ಸೇರಿದ್ದ ಜನರ ವಿಡಿಯೋವನ್ನು ಎನ್​ಆರ್​ಸಿ ಮತ್ತು ಎನ್​ಪಿಆರ್​ ವಿರೋಧಿ ಪ್ರತಿಭಟನೆಗೆ ತಳುಕು ಹಾಕಿ ಅಪಪ್ರಚಾರ ನಡೆಸಲಾಗಿದೆ.

ಫೇಸ್​ಬುಕ್​ ಬಳಕೆದಾರ ಎ.ರೆಹಮಾನ್​ ಶೇಕ್​ ಎಂಬುವರು ವಿಡಿಯೋವನ್ನು ಪೋಸ್ಟ್​ ಮಾಡಿ, ಎನ್​ಆರ್​ಸಿ ಮತ್ತು ಎನ್​ಪಿಆರ್​ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಎಂದು ಬರೆದುಕೊಂಡಿದ್ದಾರೆ. ಪೋಸ್ಟ್​ ಮಾಡಿದ ದಿನದಿಂದ ಈವರೆಗೂ 11 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 1,200 ಮಂದಿ ಶೇರ್​ ಮಾಡಿಕೊಂಡಿದ್ದಾರೆ.

ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ನೋಡಿದಾಗ ಈ ಸಂಬಂಧ ಲಾಸ್​ ಏಂಜಲೀಸ್​ ಟೈಮ್ಸ್​ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವುದು ಕಂಡುಬಂದಿದೆ. ಅದರ ಪ್ರಕಾರ ಜನವರಿ 5ರಂದು ಇರಾನ್​ನ ನೈರುತ್ಯ ನಗರ ಅಹವಾಜ್​ನಲ್ಲಿ ನಡೆದ ಕಾಸಿಂ ಸುಲೆಮಾನಿ ಅಂತ್ಯಕ್ರಿಯೆ ವೇಳೆ ಕಂಡುಬಂದ ಜನಸಾಗರವಾಗಿದೆ. ಜನವರಿ 3ರಂದು ಬಾಗ್ದಾದ್​ ವಿಮಾನ ನಿಲ್ದಾಣದ ಬಳಿ ಅಮೆರಿಕ ಸೇನೆ ನಡೆಸಿದ ಡ್ರೋಣ್​ ದಾಳಿಯಲ್ಲಿ ಸುಲೆಮಾನಿ ಮೃತಪಟ್ಟಿದ್ದರು.

ಟೆಲಿಗ್ರಾಫ್​ನ ಯೂಟ್ಯೂಬ್​ ವಿಡಿಯೋದಲ್ಲೂ ಇದೇ ದೃಶ್ಯಗಳನ್ನು ಬೇರೆ ಆಯಾಮದಲ್ಲಿ ಕಾಣಬಹುದಾಗಿದೆ. ಇರಾನಿಯನ್​ ಜನರಲ್​ ಖಾಸಿಂ ಸುಲೇಮಾನಿ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ ಕ್ಷಣ ಎಂದು ವಿಡಿಯೋ ಕುರಿತು ಬರೆದುಕೊಳ್ಳಲಾಗಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ವೈರಲ್​ ಆಗಿರುವ ವಿಡಿಯೋದಲ್ಲಿ ಇರಾನ್​ ಧ್ವಜವನ್ನು ಗಮನಿಸಬಹುದಾಗಿದ್ದು, ಇದು ಕೂಡ ಸಾಕ್ಷ್ಯಾಧಾರವಾಗಿದೆ. ಭಾರತದಲ್ಲೂ ಎನ್​ಆರ್​ಸಿ ಮತ್ತು ಎನ್​ಪಿಆರ್​ ಹಾಗೂ ಸಿಎಎ ವಿರೋಧಿಸಿ ಸಾಲು ಸಾಲು ಪ್ರತಿಭಟನೆ ನಡೆಯುತ್ತಿದೆ. ಆದರೆ, ವೈರಲ್​ ಆಗಿರುವ ವಿಡಿಯೋಗೂ ಈ ಪ್ರತಿಭಟನೆಗಳಿಗೂ ಸಂಬಂಧವಿಲ್ಲ ಎಂದು ಫ್ಯಾಕ್ಟ್​ಚೆಕ್​ ಮೂಲಕ ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net