

ನವದೆಹಲಿ: ಒಬ್ಬ ಬಾಲಕ ಮಹಾತ್ಮ ಗಾಂಧಿ ಜತೆ ನಿಂತಿರುವ ಕಪ್ಪು ಬಿಳುಪಿನ ಫೋಟೋ ಫೇಸ್ಬುಕ್ನಲ್ಲಿ ಹರಿದಾಡುತ್ತಿದ್ದು, ಗಾಂಧಿ ಜತೆ ನಿಂತಿರುವ ಆ ಬಾಲಕ ಆಧ್ಯಾತ್ಮಿಕ ಗುರು ದಲೈ ಲಾಮಾ ಎಂದು ಬರೆಯಲಾಗಿದೆ.
ಸಿಯೊ ಚೀಚೂಂಗ್ ಎಂಬುವವರು ದಲೈ ಲಾಮಾ ಎಂಬ ಗ್ರೂಪ್ ಮಾಡಿದ್ದು ಅದರಲ್ಲಿ ಈ ಫೋಟೋ ಹಂಚಿಕೊಂಡು ಗಾಂಧಿ ಜತೆಗೆ ನಿಂತಿರುವ ಈ ಬಾಲಕ ದಲೈ ಲಾಮಾ ಎಂದು ಬರೆದುಕೊಂಡಿದ್ದಾರೆ.
ಇಂಡಿಯಾ ಟುಡೇ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಯಲಾದ ಅಂಶವೆಂದರೆ ಈ ಫೋಟೋವನ್ನು ತಿದ್ದುಪಡಿ ಮಾಡಲಾಗಿದೆ. ಈ ಎರಡು ಫೋಟೋಗಳು ಬೇರೆ ಬೇರೆ. ಚಿತ್ರದಲ್ಲಿರುವ ಬಾಲಕ ದಲೈ ಲಾಮಾ ಆವರೇ. ಆದರೆ ಈ ಫೋಟೋವನ್ನು ಗಾಂಧಿ ಫೋಟೋದ ಜತೆಗೆ ಬೆರೆಸಲಾಗಿದೆ.
ಹೀಗೆ ಫೇಸ್ಬುಕ್ನಲ್ಲಿ ಹರಿದು ಬಂದ ಫೋಟೋವನ್ನು ಬಹಳ ಮಂದಿ ಹಂಚಿಕೊಂಡಿದ್ದಾರೆ. ಮತ್ತು ಇದನ್ನು ನಿಜ ಫೋಟೋ ಎಂದೇ ಭಾವಿಸಿದ್ದಾರೆ. ಕಳೆದ ವರ್ಷದಿಂದ ಈ ಫೋಟೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗಾಂಧಿಯ ಈ ಫೋಟೋ ಗೆಟ್ಟಿ ಇಮೇಜ್ನಲ್ಲಿ ಲಭ್ಯವಿದೆ. ಇದನ್ನು 1931ರ ನವೆಂಬರ್ನಲ್ಲಿ ಲಂಡನ್ನಲ್ಲಿ ತೆಗೆದಿದ್ದು. ಭಾರತೀಯ ಸಾಂವಿಧಾನಿಕ ಸುಧಾರಣೆಗಳು ಎಂಬ ವಿಷಯದ ಮೇಲೆ ನಡೆದಿದ್ದ ಸಭೆಯಲ್ಲಿ ಗಾಂಧಿ ಭಾಗವಹಿಸಿದ್ದರು. ಆಗ ಇನ್ನೂ ದಲೈ ಲಾಮಾ ಹುಟ್ಟಿರಲಿಲ್ಲ!
ಇನ್ನು ದಲೈ ಲಾಮಾ ಅವರು ಬಾಲಕದಿದ್ದಾಗಿನ ಫೋಟೋ ಅವರ ವೆಬ್ ಪುಟದಿಂದಲೇ ದೊರೆಯುತ್ತದೆ. ಈ ವೆಬ್ಸೈಟ್ನ ಪ್ರಕಾರ ಟಿಬೆಟ್ನ ಕುಂಬುಂನಲ್ಲಿ 1935 ಜುಲೈ 6ರಂದು ಈ ಫೋಟೋ ತೆಗೆದದ್ದು. ಆಗ ಬಾಲಕ ದಲೈ ಲಾಮಾಗೆ ಕೇವಲ 4 ವರ್ಷ!
ಈ ಫೋಟೋ ಸುಳ್ಳು ಎನ್ನಲು ಇನ್ನೊಂದು ಪುರಾವೆ ಇದೆ. ಹಿಂದುಸ್ತಾನ್ ಟೈಮ್ಸ್ ಪತ್ರಿಕೆಯು ದಲೈ ಲಾಮಾ ಅವರ ಹೇಳಿಕೆಯೊಂದನ್ನು ಪ್ರಕಟಿಸಿದೆ. ಅದು ಹೀಗಿದೆ... "ನನ್ನ ಜೀವನದಲ್ಲಿ ಗಾಂಧಿ ಅವರನ್ನು ಭೇಟಿಯೇ ಆಗಿಲ್ಲ. ಬದಲಿಗೆ ಒಂದು ಬಾರಿ ಅವರನ್ನು ಕನಸಲ್ಲಿ ಕಂಡಿದ್ದೇನೆ" ಎಂದು ಸ್ವತಃ ದಲೈ ಲಾಮಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)