

ಕೋಲಾರ: ಸಹಕಾರ ರಂಗದಲ್ಲಿ ಎಲ್ಲ ವರ್ಗದವರು ಪಾಲ್ಗೊಳ್ಳುವ ಮೂಲಕ ಸಾಮಾಜಿಕ ನ್ಯಾಯ ಪಡೆಯಬಹುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಹಂಚಿಕೆ ಮಾಡಬಹುದು ಎಂದು ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ ಹೇಳಿದರು.
ನಗರದ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಮಂಗಳವಾರ ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟದ ಸಹಯೋಗದಿಂದ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಸಹಕಾರ ರಂಗದ ಬಗ್ಗೆ ಪೀಳಿಗೆ ಮಾಹಿತಿ ಅರಿತುಕೊಳ್ಳಬೇಕು. ಕಾಯ್ದೆಯಲ್ಲಿನ ಬದಲಾವಣೆಗಳನ್ನು ಸಹಕಾರಿಗಳಿಗೆ ಅರಿವು ಮೂಡಿಸುವುದು ಒಕ್ಕೂಟದ ಜವಾಬ್ದಾರಿ. ಇದರ ಭಾಗವಾಗಿಯೇ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟವು ಸಹಕಾರಿ ರಂಗದಲ್ಲಿ ಛಾಪು ಮೂಡಿಸಿವೆ. ವಿದ್ಯಾರ್ಥಿ ಯುವ ಸಮೂಹ ಅರಿವು ಮೂಡಿಸಿಕೊಂಡು ಭವಿಷ್ಯದಲ್ಲಿ ಯಶಸ್ವಿ ಸಹಕಾರಿಗಳಾಗಬೇಕು ಎಂದು ಸಲಹೆ ನೀಡಿದರು.
ಸಹಕಾರಿ ಯೂನಿಯನ್ ನಿರ್ದೇಶಕ ರುದ್ರಸ್ವಾಮಿ ಮಾತನಾಡಿ, ಸಹಕಾರ ತತ್ವಗಳ ಕುರಿತು ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಅರಿವು ನೀಡುವ ಅಗತ್ಯವಿದೆ, ಈ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಸಹಕಾರಿ ಎಂದರು.