

ಬೆಂಗಳೂರು : ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮೇ ತಿಂಗಳ ಪಡಿತರ ವಸ್ತುಗಳನ್ನು ಪಡೆಯಲು ಪಡಿತರ ಚೀಟಿದಾರರ ಬೆರಳು ಮುದ್ರೆ(ಬಯೋಮೆಟ್ರಿಕ್)ಯನ್ನು ಪಡೆಯುದೇ ವಿತರಿಸಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ. ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಬೆರಳಚ್ಚು ನೀಡಲು ಒತ್ತಾಯಿಸುವ ಹಾಗಿಲ್ಲ ಎಂದಿದೆ.
ಮೇ ತಿಂಗಳ ಪಡಿತರ ವಸ್ತುಗಳನ್ನು ಪಡಿತರ ಚೀಟಿದಾರರು ಆಧಾರ್ ಜೊತೆ ಜೋಡಿಸಿಕೊಂಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಿ ವಿತರಿಸಲಾಗುತ್ತದೆ. ಜೊತೆಗೆ ವಯೋವೃದ್ಧರು, ಅನಾರೋಗ್ಯಪೀಡಿತರು ಮತ್ತು ವಿಶೇಷಚೇತನರಿಗೆ ವಿನಾಯಿತಿ ಸೌಲಭ್ಯದಡಿ ವಿತರಿಸಲಾಗುವುದು. ಪಡಿತರ ಚೀಟಿದಾರರ ಚೆಕ್ಲಿಸ್ಟ್ / ಮಾನ್ಯುಯಲ್ ಮೂಲಕವೂ ನೇರವಾಗಿ ವಿತರಿಸಲಾಗುವುದು. ರಾಜ್ಯ ಮತ್ತು ಹೊರರಾಜ್ಯದ ಪಡಿತರ ಚೀಟಿದಾರರಿಗೆ ಪೋರ್ಟಬಲಿಟಿ ಮೂಲಕ ಪಡಿತರ ವಿತರಣೆ ಸೌಲಭ್ಯ ಕೂಡ ಇರಲಿದೆ ಎಂದು ರಾಜ್ಯದ ಆಹಾರ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಪಡಿತರದಾರರಿಗೆ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಆರೋಗ್ಯಕರ ವಾತಾವರಣದಲ್ಲಿ ಸರಳ ಕ್ರಮ ತೆಗೆದುಕೊಂಡು ವಸ್ತುಗಳ ವಿತರಣೆ ಮಾಡುವ ಉದ್ದೇಶ ಸರ್ಕಾರದ್ದಾಗಿದೆ. ಪಡಿತರ ಚೀಟಿದಾರರಿಗೆ ಯಾವುದೇ ಅನಾನುಕೂಲಗಳಾದಲ್ಲಿ ಆಹಾರ, ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತಾಲಯಕ್ಕೆ 1967, 14445 ಅಥವಾ 1800 425 9339 ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಈ ಬಗ್ಗೆ ಸಂಬಂಧಿತ ಗ್ರಾಮ ಪಂಚಾಯಿತಿಗಳಿಗೆ ಅಥವಾ ತಹಸೀಲ್ದಾರ್ಗಳಿಗೆ ಕೂಡ ದೂರು ದಾಖಲಿಸಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.