

ಚಿತ್ರದುರ್ಗ: ಕಾಂಗ್ರೆಸ್ ಆಡಳಿತಾವಧಿ ಅನ್ನಭಾಗ್ಯದಲ್ಲಿ ಲೂಟಿಯಾಗುತ್ತಿತ್ತು. ಅಕ್ಕಿ, ಫಲಾನುಭವಿಗಳಿಗೆ ತಲುಪುವ ಬದಲು ಪಾಲಿಶ್‌ನೊಂದಿಗೆ ಮಾರಾಟವಾಗುತ್ತಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದ ಮುರುಘ ರಾಜೇಂದ್ರ ಮೈದಾನದಲ್ಲಿ ಶನಿವಾರ ಕೇಂದ್ರ, ರಾಜ್ಯ ಸರ್ಕಾರಗಳ ಫಲಾನುಭವಿಗಳ ಜಿಲ್ಲಾಮಟ್ಟದ ಮೊದಲ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿ ಎಷ್ಟು ಮಂದಿಗೆ ಸೌಲಭ್ಯಗಳು ದೊರಕಿವೆ? ಫಲಾನುಭವಿಗಳಿಗೆ ಸವಲತ್ತುಗಳು ತಲುಪದಿರುವುದೇ ದೊಡ್ಡ ದೌರ್ಭಾಗ್ಯ. ಹಾಸಿಗೆ, ದಿಂಬು ಸೇರಿ ಎಲ್ಲದರಲ್ಲೂ ಮಿತಿ ಮೀರಿದ ಭ್ರಷ್ಟಾಚಾರವಾಗಿತ್ತು ಎಂದು ದೂರಿದರು.
ತಮ್ಮ ಆಡಳಿತಾವಧಿಯಲ್ಲಿ ಮಾತ್ರ ಅಭಿವೃದ್ಧಿಯಾಗಿದೆಯೇ? ನಮ್ಮ ಕೆಲಸಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಎಸ್‌ಸಿ, ಎಸ್ಟಿ ಸಮುದಾಯಗಳ ಮೇಲೆ ಕಾಳಜಿಯಿಂದಾಗಿ ಮೀಸಲು ಪ್ರಮಾಣ ಬಿಜೆಪಿ ಹೆಚ್ಚಿಸಿದೆ ಎಂದರು.
ದುಡ್ಡಲ್ಲ, ದುಡಿಮೆಯೇ ದೊಡ್ಡಪ್ಪ. ಜನರು ಶ್ರೀಮಂತರಾದರೆ ರಾಜ್ಯದ ಪ್ರಗತಿ ಸಾಧ್ಯ. ಕಟ್ಟಕಡೆ ವ್ಯಕ್ತಿಗೂ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅವಕಾಶ ನೀಡಬೇಕು. ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಯ ಭರವಸೆಗಳನ್ನು ಬಿಜೆಪಿ ಹುಸಿ ಮಾಡಿಲ್ಲ. ಜನರ ಭವಿಷ್ಯಕ್ಕಾಗಿ ಕೆಲಸ ಮಾಡುವುದು ಆಳುವವರ ಹೊಣೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 53.43 ಲಕ್ಷ ಫಲಾನುಭವಿಗಳಿಗೆ 16 ಸಾವಿರ ಕೋಟಿ ರೂ. ಜಮಾ ಆಗಿದೆ ಎಂದು ಹೇಳಿದರು.
ಪಿಎಂ ಅವಾಸ್ ಯೋಜನೆಯಡಿ ರಾಜ್ಯಕ್ಕೆ ಮಂಜೂರಾದ 17 ಲಕ್ಷ ಮನೆಗಳಲ್ಲಿ 5 ಲಕ್ಷ ಮನೆ ಹಾಗೂ 12 ಲಕ್ಷಕ್ಕೂ ಹೆಚ್ಚು ಶೌಚಗೃಹಗಳನ ನಿರ್ಮಿಸಲಾಗಿದೆ. 6 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಮಕ್ಕಳ ಪೌಷ್ಟಿಕ ಆಹಾರಕ್ಕೆ ಪಿಎಂ ಅನುದಾನ ಸಿಕ್ಕಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಪೂರೈಕೆ ಪ್ರತಿ ವರ್ಷ 8 ಸಾವಿರ ಕೋಟಿ ರೂ. ಭರಿಸಲಾಗುತ್ತಿದೆ.
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಕೃಷಿ ಕಾರ್ಮಿಕರು, ನೇಕಾರರ ಮಕ್ಕಳಿಗೂ ರೈತ ವಿದ್ಯಾನಿಧಿ ವಿಸ್ತರಿಸಲಾಗಿದೆ. ಕಾಯಕ ಯೋಜನೆಯಡಿ 50 ಸಾವಿರ ರೂ. ಸಹಾಯಧನ ನೀಡುತ್ತಿದ್ದೇವೆ ಎಂದ ಅವರು, ಜನರ ಕಲ್ಯಾಣಕ್ಕಾಗಿ ಮಾಡುವ ವೆಚ್ಚ, ಬಂಡವಾಳವಾಗಿ ನಾಡನ್ನು ಆರ್ಥಿಕವಾಗಿ ಬಲಿಷ್ಠ ಗೊಳಿಸಲಿದೆ ಎಂದು ಹೇಳಿದರು.
ದೂರದೃಷ್ಟಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಮಾಸ್ಕ್ ಇಲ್ಲದೆ ದೊಡ್ಡ ಪ್ರಮಾಣದಲ್ಲಿಂದು ಸೇರಲು ಸಾಧ್ಯವಾಗಿದೆ. ಮಾಜಿ ಸಿಎಂ ಬಿಎಸ್‌ವೈ ಕೂಡ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿದರು.
ಸಚಿವರಾದ ಆನಂದ್‌ಸಿಂಗ್, ಆಚಾರ್ ಹಾಲಪ್ಪ ಬಸಪ್ಪ, ಎಸ್.ಟಿ.ಸೋಮಶೇಖರ್, ವಿಧಾನಪರಿಷತ್ ಮುಖ್ಯಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಸದಸ್ಯರಾದ ಕೆ.ಎಸ್.ನವೀನ್, ಚಿದಾನಂದಗೌಡ, ತುಳಸಿಮುನಿರಾಜುಗೌಡ, ಹೇಮಲತಾ ನಾಯಕ್, ಶಾಸಕರಾದ ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್,ಪ್ರೊ.ಲಿಂಗಣ್ಣ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಜಿಲ್ಲಾ ಉಸ್ತುವಾರಿ ಕಾರ‌್ಯದರ್ಶಿ ರಾಮ್ಪ್ರಸಾದ್ ಮನೋಹರ್, ಡಿಸಿ ಜಿಆರ್‌ಜೆ ದಿವ್ಯಾಪ್ರಭು, ಎಡಿಸಿ ಟಿ.ಜವರೇಗೌಡ, ಎಸಿ ಆರ್.ಚಂದ್ರಯ್ಯ, ಎಸ್‌ಪಿ ಜಿಪಂ ಸಿಇಒ ಎಂ.ಎಸ್.ದಿವಾಕರ್, ಮುಖ್ಯಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಮತ್ತಿತರರು ಇದ್ದರು.
ಮೋದಿ ಅಪ್ರತಿಮ ನಾಯಕ
ಸಿಎಂ ನನ್ನ ಕ್ಷೇತ್ರದಲ್ಲಿ 2,800 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರದಲ್ಲಿ ಮೋದಿ ಅವರಂಥ ಅಪ್ರತಿಮ ನಾಯಕ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಇಂಧನ,ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ ಎಂದು ಟೀಕಿಸುವ ಕಾಂಗ್ರೆಸ್ಸಿಗರು, ಪಾಕಿಸ್ತಾನ ಮತ್ತಿತರ ನೆರೆಯ ರಾಷ್ಟ್ರಗಳಲ್ಲಿ ಏನಾಗಿದೆ ಎಂದು ನೋಡಲಿ ಎಂದರು. ವಿಶ್ವದ ಮುಂಚೂಣಿ ನಾಯಕ ಮೋದಿ ಅವರಂಥವರ ನಾಯಕತ್ವ ನಮಗೂ ಬೇಕೆಂದು ಪಾಕಿಸ್ತಾನದ ಪ್ರಜೆಗಳು ಹೇಳುತ್ತಿದ್ದರೂ ಪ್ರತಿಪಕ್ಷಗಳಿಗೆ ಅರ್ಥವಾಗುತ್ತಿಲ್ಲ ಎಂದರು.
*ಕೋಟ್
ಬರದ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಕೊಟ್ಟ ಕೀರ್ತಿ ಬಿಜೆಪಿ ಸರ್ಕಾರದ್ದು. ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ರೂ. ಅನುದಾನ ನೀಡಿವನ್ನು ನೀಡುವ ಮೂಲಕ ನಮ್ಮ ಸರ್ಕಾರ ನೀರಾವರಿ ಯೋಜನೆಗಳು ಪರವಾಗಿದೆ ಎಂದು ಘೋಷಿಸಿದೆ. ಸಿಎಂ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಸ್ವಸಹಾಯ ಸಂಘಗಳ ಗುಂಪುಗಳಿಗೆ 1 ಸಾವಿರ ರೂ. ಸಹಾಯಧನ ಹೆಚ್ಚಿಸಿದ್ದಾರೆ. ಕೌಶಲಾಭಿವೃದ್ಧಿಗೂ ಒತ್ತು ನೀಡಿದ್ದಾರೆ.
ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು ಶಾಸಕಿ
*ಕೋಟ್
ಫಲವನ್ನು ಪಡೆದವರನ್ನು ಕರೆದು ಅರಿವು ಮೂಡಿಸುವ, ಸಿಗದವರಿಗೆ ತಲುಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಿಎಂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ 2800 ಕೋಟಿ ರೂ. ಗೂ ಹೆಚ್ಚು ಮೊತ್ತದ ಯೋಜನೆಗೆ ಚಾಲನೆ ನೀಡಲಾಗಿದ್ದು, ನಮ್ಮ ಸರ್ಕಾರಗಳು ಜನಪರ ಆಡಳಿತವನ್ನ್ನು ನೀಡುತ್ತಿವೆ.
ಬಿ.ಸಿ.ಪಾಟೀಲ್,ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್
*ಕೋಟ್
ಮೀಸಲು ಪ್ರಮಾಣವನ್ನು ಹೆಚ್ಚಿಸುವ ಹಾಗೂ ಪಂಗಡಕ್ಕೆ ಅವಶ್ಯಕವಾಗಿರುವ ಅನೇಕ ಯೋಜನೆಗಳನ್ನು ಒದಗಿಸುವ ಮೂಲಕ ಎಸ್ಸಿ, ಎಸ್ಟಿ ಸಮುದಾಯಗಳ ಹೃದಯಗೆದ್ದ ಏಕೈಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಮುಚ್ಚುವ ಸ್ಥಿತಿ ತಲುಪಿದ್ದ ಡಾ.ಬಾಬು ಜಗಜೀವನ್‌ರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ 480 ಕೋಟಿ ರೂ. ಅನುದಾನ ಕೊಟ್ಟು ಅದನ್ನು ಪುನರುಜ್ಜೀವನಗೊಳಿಸಿದ್ದಾರೆ. ಈ ಸಂಸ್ಥೆಯಿಂದ ಜಿಲ್ಲೆಗೆ 53 ಕೋಟಿ ರೂ. ಅನುದಾನ ಸಿಕ್ಕಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರಂತರವಾಗಿ ಜನ ರಿಗೆ ಸೌಲಭ್ಯಗಳನ್ನು ತಲುಪಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿವೆ.
ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ
ಡಿಸಿಗೆ ಆದೇಶಿಸಿದ ಸಿಎಂ
ಚಿತ್ರದುರ್ಗ ರೈತ ವಿದ್ಯಾನಿಧಿ ಯೋಜನೆ ಫಲಾನುಭವಿಗಳ ಕಡಿಮೆ ಇರುವುದಕ್ಕೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಅರ್ಹರೆಲ್ಲರನ್ನೂ ಯೋಜನೆಗೆ ಸೇರಿಸುವಂತೆ ಸ್ಥಳದಲ್ಲೇ ಜಿಲ್ಲಾಧಿಕಾರಿಗೆ ಆದೇಶಿಸಿದರು.