ರಾಹುಲ್, ತರೂರ್​ಗೆ ಹಕ್ಕುಚ್ಯುತಿ ನೋಟಿಸ್

Rahul
Published on

ನವದೆಹಲಿ: ಫೇಸ್​ಬುಕ್ ಪ್ರಕರಣ ಸಂಬಂಧ ಕಾಂಗ್ರೆಸ್ ಸಂಸದರಾದ ರಾಹುಲ್ ಗಾಂಧಿ ಮತ್ತು ಶಶಿ ತರೂರ್ ವಿರುದ್ಧ ಬಿಜೆಪಿ ಹಕ್ಕುಚ್ಯುತಿ ಗೊತ್ತುವಳಿ ಮಂಡಿಸಿದೆ. ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತರೂರ್ ಹಕ್ಕುಚ್ಯುತಿ ಗೊತ್ತುವಳಿ ನೋಟಿಸ್ ನೀಡಿದ ಬೆನ್ನಲ್ಲೇ ದುಬೆ ಕೂಡ ಅದೇ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ.

ರಾಹುಲ್ ಗಾಂಧಿ ವಿರುದ್ಧವೂ ನೋಟಿಸ್ ನೀಡಿದ್ದಾರೆ. ತರೂರ್ ಅವರು ಸಭ್ಯತೆ, ನೈತಿಕತೆ ಮತ್ತು ಸಂಸದೀಯ ನಿಯಮ ಮೀರಿದ್ದಾರೆ. ರಾಹುಲ್ ಗಾಂಧಿ ‘ಸುಳ್ಳು ಸುದ್ದಿ ಹಾಗೂ ದ್ವೇಷವನ್ನು ಬಿತ್ತುತ್ತಿದ್ದಾರೆ’ ಎಂದು ನೋಟಿಸ್​ನಲ್ಲಿ ದುಬೆ ಹೇಳಿದ್ದಾರೆ. ಫೇಸ್​ಬುಕ್​ನ ‘ದುರ್ನಡತೆ’ ಕುರಿತು ರ್ಚಚಿಸಲು ಸಂಸತ್ತಿನ ಮಾಹಿತಿ ತಂತ್ರಜ್ಞಾನ ಕುರಿತ ಸ್ಥಾಯಿ ಸಮಿತಿ ಸಭೆಯನ್ನು ಕರೆಯುವುದಾಗಿ ಅದರ ಅಧ್ಯಕ್ಷರಾದ ತರೂರ್ ಹೇಳಿದ್ದರು.

ಈ ನಿರ್ಧಾರದ ಕುರಿತು ದುಬೆ ತೀರಾ ಅವಮಾನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹಕ್ಕುಚ್ಯುತಿ ನೋಟಿಸ್​ನಲ್ಲಿ ತರೂರ್ ಅಭಿಪ್ರಾಯಪಟ್ಟಿದ್ದರು. ಬಿಜೆಪಿ ಸದಸ್ಯರು ಮಾಡಿದ ದ್ವೇಷ ಭಾಷಣಗಳನ್ನು ಹಾಗೂ ಬಲಪಂಥೀಯರ ವಿಛಿದ್ರಕಾರಿ ಅಭಿಪ್ರಾಯಗಳನ್ನು ಫೇಸ್​ಬುಕ್ ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿಯೊಂದರಲ್ಲಿ ಟಿಪ್ಪಣಿ ಮಾಡಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net