

ಮುಂಬೈ: ಚಿಕ್ಕಮಕ್ಕಳು ಫೇಸ್‌ಬುಕ್ ಖಾತೆಯನ್ನು ಹೊಂದಲು ಅವಕಾಶವಿಲ್ಲ. ಆದರೂ ಅನೇಕ ಮಕ್ಕಳು ತಮ್ಮ ವಯಸ್ಸನ್ನು ತಪ್ಪಾಗಿ ನಮೂದಿಸುವ ಮೂಲಕ ತಮಗೆ 18 ವರ್ಷ ಆಗಿದೆ ಎಂದು ತೋರಿಸಿ ಫೇಸ್‌ಬುಕ್ ಖಾತೆಯನ್ನು ಹೊಂದುತ್ತಿದ್ದಾರೆ.
ಇಂಥದ್ದೇ ಒಂದು ಖಾತೆಯನ್ನು ಹೊಂದಿರುವ 13 ವರ್ಷದ ಬಾಲಕಿ ಇದೀಗ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮಧ್ಯ ಮುಂಬೈನ ಅಗ್ರಿಪಾಡಾದ 13 ವರ್ಷದ ಬಾಲಕಿ ಈಕೆ. ಫೇಸ್‌ಬುಕ್‌ನಲ್ಲಿ 22 ವರ್ಷದ ಯುವಕನನ್ನು ಪರಿಚಯ ಮಾಡಿಕೊಂಡಿದ್ದಾಳೆ. ಅವರಿಬ್ಬರ ನಡುವೆ ಏನೇನು ಮಾತುಕತೆ ನಡೆದಿದೆ ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಚರ್ಚೆಗೆ ಗ್ರಾಸವಾದ ಬಾಲಕಿ ಬಿಡುಗಡೆ ಪ್ರಕರಣ
ಆದರೆ ಬಾಲಕಿ ಏಕಾಏಕಿ ಮನೆಯಿಂದ ನಾಪತ್ತೆಯಾಗಿರುವ ಕುರಿತಂತೆ ಪಾಲಕರು ದೂರು ದಾಖಲು ಮಾಡಿದ್ದರು. ನಂತರ ಬಾಲಕಿಯನ್ನು ಅದೇ ಫೇಸ್‌ಬುಕ್ ಸ್ನೇಹಿತ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರಿಗೆ ತನಿಖೆಯಿಂದ ತಿಳಿದುಬಂದಿದೆ.
ಅಪಹರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪ್ರತ್ಯೇಕ ದಾಳಿ ನಡೆಸಿದ ಪೊಲೀಸರು 22 ವರ್ಷದ ಮುಖ್ಯ ಆರೋಪಿ ಮತ್ತು ಆತನ ನಾಲ್ವರು ಸಹಾಯಕರನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಅಪಹರಿಸಲು ಈ ನಾಲ್ವರ ಸಹಾಯ ತೆಗೆದುಕೊಂಡಿರುವುದಾಗಿ ಯುವಕ ಹೇಳಿದ್ದಾನೆ.
ಇವರಿಬ್ಬರ ನಡುವೆ ಫೇಸ್‌ಬುಕ್‌ನಲ್ಲಿ ಮಾತುಕತೆ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ.