ಡಿಜಿಟಲ್ ಗೀಳಿನಿಂದ ಮಕ್ಕಳಲ್ಲಿ ದೃಷ್ಟಿದೋಷ; ಕೋವಿಡ್ ಪರಿಣಾಮ ಮಕ್ಕಳಲ್ಲಿ ಹೆಚ್ಚುತ್ತಿದೆ ಕಣ್ಣಿನ ಸಮಸ್ಯೆ

Eye
Published on

| ಕೆ.ಎಂ. ಪಂಕಜ ಬೆಂಗಳೂರು

ಮೊಬೈಲ್ ಫೋನ್, ಕಂಪ್ಯೂಟರ್ ಸೇರಿ ಅತಿಯಾದ ಡಿಜಿಟಲ್ ತಂತ್ರಜ್ಞಾನ ಬಳಕೆ ಮಕ್ಕಳ ಕಣ್ಣಿಗೆ ಮಾರಕವಾಗಿ ಪರಿಣಮಿಸಿದೆ. ಕೋವಿಡ್ ಸಂದರ್ಭದಲ್ಲಿ ಆರಂಭವಾದ ಆನ್​ಲೈನ್ ತರಗತಿ ಹಾಗೂ ಮಕ್ಕಳಲ್ಲಿ ಹೆಚ್ಚಿದ ಮೊಬೈಲ್ ಗೀಳು ಅವರಲ್ಲಿ ದೃಷ್ಟಿ ದೋಷಕ್ಕೆ ಕಾರಣವಾಗಿದೆ.

ಕೋವಿಡ್​ನಿಂದಾಗಿ ಸತತ ಎರಡು ವರ್ಷ ಮಕ್ಕಳು ಆನ್​ಲೈನ್ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಉಳಿದ ಸಮಯದಲ್ಲಿ ಮೊಬೈಲ್ ಸೇರಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಮಾಡುತ್ತ ದಿನ ಕಳೆಯುತ್ತಿದ್ದರು. ಇದರಿಂದ ದೈಹಿಕ ಚಟುವಟಿಕೆಗಳಿಲ್ಲದೆ ಮಕ್ಕಳು ಬೊಜ್ಜು ಸೇರಿ ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬೇಕಾಯಿತು. ಅದಕ್ಕೂ ಮೀರಿ ದೃಷ್ಟಿ ದೋಷದಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇನ್ನು, ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಮೊಬೈಲ್ ಗೀಳಿಗೆ ಬಿದ್ದ ಮಕ್ಕಳಲ್ಲಿ ಇದೀಗ ಸಮೀಪ ಮತ್ತು ದೂರ ದೃಷ್ಟಿ ಸಮಸ್ಯೆ, ಒಣ ಕಣ್ಣಿನ ತೊಂದರೆ, ಕಣ್ಣುಗಳು ಮಂಜಾಗುವುದು, ಕಣ್ಣಿನಲ್ಲಿ ಸೋಂಕು ಸೇರಿ ನಾನಾ ಸಮಸ್ಯೆಗಳು ಕಾಡಲಾರಂಭಿಸಿವೆ. ಬೆಂಗಳೂರು ನಾರಾಯಣ ನೇತ್ರಾಲಯವೊಂದರಲ್ಲೇ ನಿತ್ಯ ತಪಾಸಣೆಗೆ ಒಳಗಾಗುವ ಮಕ್ಕಳಲ್ಲಿ ಶೇ.50 ಮಕ್ಕಳಿಗೆ ದೃಷ್ಟಿ ಸಮಸ್ಯೆಯಿಂದ ಕನ್ನಡಕ ಸೂಚಿಸಲಾಗುತ್ತಿದೆ. ಮಿಂಟೋ, ಡಾ.ಅಗರ್​ವಾಲ್ ಸೇರಿ ಇತರೆ ಕಣ್ಣಿನ ಆಸ್ಪತ್ರೆಗಳಲ್ಲೂ ಇದೇ ಸ್ಥಿತಿ ಇದೆ ಎನ್ನುತ್ತಾರೆ ನೇತ್ರ ತಜ್ಞರು.

ಏನೇನು ಸಮಸ್ಯೆ ಮತ್ತು ಲಕ್ಷಣಗಳು?

  • ಅತಿಯಾದ ಡಿಜಿಟಲ್ ತಂತ್ರಜ್ಞಾನ, ಸಾಧನಗಳ ಬಳಕೆಯಿಂದ ಎಳೆಯ ಮಕ್ಕಳ ದೃಷ್ಟಿ ಮೇಲೆ ತೀವ್ರ ಒತ್ತಡ
  • ಕಣ್ಣಿನಲ್ಲಿ ನೋವು, ಉರಿ, ತುರಿಕೆ, ನೀರು ಹರಿಯುವುದು, ಕೆಂಪಾಗುವುದು
  • ಮೊಬೈಲ್ ಸೇರಿ ವಿವಿಧ ಸಾಧನಗಳ ನಿರಂತರ ವೀಕ್ಷಣೆಯಿಂದಾಗಿ ತಲೆನೋವು
  • ಕಣ್ಣಿನ ಮೇಲಿನ ಒತ್ತಡದಿಂದಾಗಿ ಅಸ್ಪಷ್ಟ ದೃಷ್ಟಿ ಹಾಗೂ ದೂರದೃಷ್ಟಿ ಸಮಸ್ಯೆ
  • ಕಣ್ಣಿನ ಒಳಭಾಗದಲ್ಲಿ ನೀರಿನ ಪಸೆಯಿಲ್ಲದೆ ಕಣ್ಣುಗಳು ಶುಷ್ಕವಾಗುವುದು

ಪರಿಹಾರಗಳು

  • ಕಂಪ್ಯೂಟರ್ ಬಳಸುವಾಗ ಕೋಣೆಯಲ್ಲಿ ಹೆಚ್ಚು ಬೆಳಕು ಇರುವಂತೆ ನೋಡಿಕೊಳ್ಳಬೇಕು.
  • ಕಂಪ್ಯೂಟರ್ ಪರದೆ ನಿರ್ದಿಷ್ಟ ಅಂತರದಲ್ಲಿರಲಿ.

20-20-20 ನಿಯಮ ಪಾಲಿಸಿ: ಕಂಪ್ಯೂಟರ್ ಹೆಚ್ಚು ಬಳಸುವವರು, ಹೆಚ್ಚಿನ ಸಮಯ ಕೆಲಸ ಮಾಡುವವರು ಕಣ್ಣಿನ ಒತ್ತಡ ನಿವಾರಿಸಿಕೊಳ್ಳಲು ಪ್ರತಿ 20 ನಿಮಿಷಗಳಿಗೊಮ್ಮೆ 20 ಬಾರಿ ಕಣ್ಣುಗಳನ್ನು ಮಿಟುಕಿಸಬೇಕು. 20 ಸೆಕೆಂಡುಗಳ ಕಾಲ ಕಣ್ಣಿಗೆ ವಿಶ್ರಾಂತಿ ನೀಡಬೇಕು. ಹೀಗೆ ಮಾಡುವುದರಿಂದ ಕಣ್ಣಿನ ಒತ್ತಡ ತಪ್ಪಿಸಬಹುದಾಗಿದೆ.

ಕೋವಿಡ್ ಸಂದರ್ಭದಲ್ಲಿ ಆನ್​ಲೈನ್ ತರಗತಿ ನಂತರ ಮನರಂಜನೆಗಾಗಿ ಮಕ್ಕಳು ಕಂಪ್ಯೂಟರ್, ಮೊಬೈಲ್, ವಿಡಿಯೋಗೇಮ್ಂತಹ ಡಿಜಿಟಲ್ ತಂತ್ರಜ್ಞಾನ ಬಳಕೆಯನ್ನು ಗೀಳಾಗಿಸಿಕೊಂಡಿರುವ ಪರಿಣಾಮ ಗಂಭೀರ ಸ್ವರೂಪದ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. | ಡಾ. ಭುಜಂಗಶೆಟ್ಟಿ ನಾರಾಯಣ ನೇತ್ರಾಲಯ ನಿರ್ದೇಶಕ ಕಣ್ಣಿನ ಮೇಲಾಗುವ ಒತ್ತಡದಿಂದ ದೃಷ್ಟಿ ಸಮಸ್ಯೆ ಹೊಂದುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಡಿಜಿಟಲ್ ತಂತ್ರಜ್ಞಾನದ ಅತಿಯಾದ ಬಳಕೆ ಹಾಗೂ ಆಹಾರ ಪದ್ಧತಿ ಎರಡೂ ಮಕ್ಕಳ ದೃಷ್ಟಿಯ ಮೇಲೆ ಪರಿಣಾಮ ಬೀರುತ್ತಿವೆ. | ಡಾ.ಸುಜಾತಾ ರಾಥೋಡ್, ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಶಾಲೆ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚು ಕಂಡು ಬರುತ್ತಿವೆ. ಹೀಗಾಗಿ ಮಕ್ಕಳಲ್ಲಿ ಸಮಸ್ಯೆ ಗಂಭೀರ ಸ್ವರೂಪಕ್ಕೆ ಹೋಗುವ ಮುನ್ನವೇ ನೇತ್ರ ತಪಾಸಣೆ ಮಾಡಿಸಿ ಸಮಸ್ಯೆ ಇದ್ದಲ್ಲಿ ಚಿಕಿತ್ಸೆ ಕೊಡಿಸಬೇಕು. | ಡಾ. ಸಂಜನಾ, ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆ ನೇತ್ರತಜ್ಞೆ

ಉಚಿತ ತಪಾಸಣೆ: ರಾಷ್ಟ್ರೀಯ ಅಂಧತ್ವ ನಿವಾರಣೆ ಕಾರ್ಯ ಕ್ರಮದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿ ವರ್ಷ ರಾಜ್ಯಾದ್ಯಂತ ಜಿಲ್ಲಾಮಟ್ಟದಲ್ಲಿ ದೃಷ್ಟಿ ದೋಷ ಪತ್ತೆ ಮಾಡಿ ಚಿಕಿತ್ಸೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಇದರಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೂ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ. ಈ ಕಾರ್ಯಕ್ರಮದಡಿ 2020ರ ವೇಳೆಗೆ ಅಂಧತ್ವ ಪ್ರಮಾಣ ಶೇ. 03ಕ್ಕೆ ಇಳಿಸುವ ಗುರಿ ಹೊಂದಲಾಗಿತ್ತು. ಆದರೆ, ಕೋವಿಡ್​ನಿಂದಾಗಿ ಕಳೆದೆರಡು ವರ್ಷಗಳಿಂದ ಕಾರ್ಯಕ್ರಮ ಸಮರ್ಪಕವಾಗಿ ನಡೆದಿರಲಿಲ್ಲ. ಹೀಗಾಗಿ ಈ ಗುರಿ ತಲುಪುವುದು ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net