

ಸಾಗರ: ಮಕ್ಕಳು ಕೇವಲ ಓದಿನಲ್ಲಿ ಯಶಸ್ಸು ಕಂಡು ಉನ್ನತ ಹುದ್ದೆಗೆ ಹೋಗಬೇಕು. ಹೆಚ್ಚಿನ ಹಣ ಸಂಪಾದಿಸಬೇಕು ಎನ್ನುವ ಗುರಿ ಇಟ್ಟುಕೊಂಡು ಮುನ್ನಡೆಯುವ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ಅವರನ್ನು ತೊಡಗಿಸಬೇಕು ಎಂದು ವೈದ್ಯ ಕೆ.ರಾಮಚಂದ್ರ ಭಾಗವತ್ ಹೇಳಿದರು.
ಸಾಗರದ ರಾಘವೇಶ್ವರ ಭವನದಲ್ಲಿ ಸಾಗರ ಹವ್ಯಕ ಮಂಡಲದಿಂದ ಆಯೋಜಿಸಿರುವ 2 ದಿನಗಳ ಕ್ರೀಡೋತ್ಸವ, ಪ್ರತಿಭೋತ್ಸವ, ಸಾಂಸ್ಕೃತಿಕ ಮತ್ತು ಆಹಾರೋತ್ಸವ ಕಾರ್ಯಕ್ರಮಗಳ ಮಂಡಲೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ವೈಯಕ್ತಿಕವಾಗಿ ಮನಸ್ಸಿದ್ದರೂ ಬಹುತೇಕ ಪಾಲಕರು ಇದಕ್ಕೆ ಅವಕಾಶ ಕೊಡುವುದಿಲ್ಲ. ಆದರೆ ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ವಿಕಸನಗೊಳ್ಳುತ್ತಾರೆ. ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಯುತ್ತಾರೆ ಎಂದರು.
ಆಹಾರ ಮೇಳ ಉದ್ಘಾಟಿಸಿ ಮಾತನಾಡಿದ ಶಿಮುಲ್ ಅಧ್ಯಕ್ಷ ಎಚ್.ಎಸ್.ವಿದ್ಯಾಧರ, ಹವ್ಯಕರ ಅಡುಗೆ ವಿಭಿನ್ನ ರುಚಿ ಜತೆಗೆ ಆರೋಗ್ಯಕ್ಕೆ ಪೂರಕ. ಸಾತ್ವಿಕ ಆಹಾರವೇ ಹವ್ಯಕರ ವಿಶೇಷ. ಮಲೆನಾಡಿನ ಆಹಾರದ ಮಹತ್ವವನ್ನು ಪರಿಚಯಿಸುವಲ್ಲಿ ಹವ್ಯಕ ಸಮುದಾಯದ ಪಾತ್ರ ದೊಡ್ಡದು ಎಂದು ತಿಳಿಸಿದರು.
ಸಾಗರ ಹವ್ಯಕ ಮಂಡಲದ ಅಧ್ಯಕ್ಷ ವಿ.ಎಸ್.ಮುರಳಿ, ಅಖಿಲ ಹವ್ಯಕ ಮಹಾಸಭಾದ ಕೆ.ಎನ್.ಶ್ರೀಧರ, ಮಹಾಮಂಡಲ ಭಾವ ರಾಮಾಯಣ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಪ್ರಾಂತ್ಯ ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ, ಸ್ಮಿತಾ ಪಾಟೀಲ್, ಭಾನ್ಕುಳಿ ಗೋಸ್ವರ್ಗ ಸಮಿತಿ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ವೀಣಾ ಭಟ್, ಮಹಾಲಕ್ಷ್ಮೀ, ವೆಂಕಟೇಶ್ ಇತರರಿದ್ದರು.