ಪೆಟ್ರೋಲ್ ಬಂಕ್ ನೌಕರನ ಸುಲಿಗೆ

Crime Logo
Published on

ಬೆಂಗಳೂರು : ಗ್ರಾಹಕನ ಸೋಗಿನಲ್ಲಿ ಬಂದ ದುಷ್ಕರ್ಮಿಯೊಬ್ಬ ಪೆಟ್ರೋಲ್ ಬಂಕ್ ನೌಕರನನ್ನು ಬೆದರಿಸಿ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಮೈಕೋ ಲೇಔಟ್ ನಡೆದಿದೆ.
ಬನ್ನೇರುಘಟ್ಟ ರಸ್ತೆಯ ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಗುರುವಾರ ತಡರಾತ್ರಿ ೧೨.೩೦ರ ಸುಮಾರಿಗೆ ಈ ಘಟನೆ ನಡೆದಿದೆ. ಪಟ್ರೋಲ್ ಬಂಕ್ ನೌಕರ ಸ್ವರಾಜ್ ಎಂಬುವವನಿಂದ ಸುಲಿಗೆಕೋರ ೨ ಮೊಬೈಲ್ ಹಾಗೂ ೪,೫೦೦ ರೂ. ನಗದು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ದೂರು ಪಡೆದು ಪ್ರಕರಣ ದಾಖಲಿಸಿ ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವರಾಜ್ ರಾತ್ರಿ ಪಾಳಿ ಕರ್ತವ್ಯದಲ್ಲಿದ್ದರು. ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದಿರುವ ಅಪರಿಚಿತ, ಪೆಟ್ರೋಲ್ ಹಾಕಿಸಿಕೊಂಡಿದ್ದಾನೆ. ಬಳಿಕ ಹಣ ಕೊಡದೆ ಮಾರಕಾಸ್ತ್ರ ತೋರಿಸಿ ಸ್ವರಾಜ್‌ನನ್ನು ಬೆದರಿಸಿ, ಎರಡು ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಸ್ವರಾಜ್ ಸಹಾಯಕ್ಕಾಗಿ ಕೂಗಿದ್ದು, ಉಳಿದ ಸಿಬ್ಬಂದಿ ಬರುವ ವೇಳೆಗೆ ದುಷ್ಕರ್ಮಿ ತಪ್ಪಿಸಿಕೊಂಡಿದ್ದಾನೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net