ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ: ಒಂದೇ ವಾರದಲ್ಲಿ 63 ಕೆರೆ ಭರ್ತಿ

yelahanka lake
Published on

ಬೆಂಗಳೂರು: ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಬೆಂಗಳೂರು ಹಾಗೂ ಸುತ್ತಮುತ್ತಲಿನ ಕೆರೆ-ಕಟ್ಟೆಗಳಿಗೆ ಹೆಚ್ಚಿನ ನೀರು ಹರಿದುಬಂದಿದೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೇ ವಾರದಲ್ಲಿ 63 ಕೆರೆಗಳು ಮಳೆನೀರಿನಿಂದ ಭರ್ತಿಯಾಗಿವೆ.

ಪ್ರಸ್ತುತ ಪಾಲಿಕೆ ಸುಪರ್ದಿಯ183 ಕೆರೆಗಳಿವೆ. ಒಂದು ವಾರದಿಂದ ಸುರಿದ ಮಳೆಯಿಂದಾಗಿ ನೀರಿನ ಮಟ್ಟವು ಗಣನೀಯವಾಗಿ ಹೆಚ್ಚಾಗಿದ್ದು 63 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯವು 32,514 ದಶಲಕ್ಷ ಲೀಟರ್ ಗಳಾಗಿದೆ. ಕಳೆದ ಏಪ್ರಿಲ್ನಲ್ಲಿ ಕೆರೆಗಳ ಒಟ್ಟು ನೀರಿನ ಸಂಗ್ರಹಣೆಯ ಪ್ರಮಾಣವು 10,595 ದಶಲಕ್ಷ ಲೀ.ಗೆ ಕುಸಿದು ಕೇವಲ 3 ಕೆರೆಗಳಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿತ್ತು. ಇದೀಗ ಮಳೆಯಿಂದಾಗಿ ಒಟ್ಟು 26,056 ದಶಲಕ್ಷ ಲೀ. ಪ್ರಮಾಣದ ನೀರು ಕೆರೆಗಳಲ್ಲಿ ಸಂಗ್ರಹವಾಗಿದೆ. ಮುಂಗಾರು ಮುನ್ನ ಇಷ್ಟು ಸಂಖ್ಯೆಯ ಕರೆಗಳು ಭರ್ತಿಯಾಗಿರುವುದು ದಶಕದ ಬಳಿಕ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯಕ್ಕೆ ಸೂಚನೆ:

ಸದ್ಯ ತುಂಬಿರುವ ಎಲ್ಲ ಕೆರೆಗಳ ತೂಬುಗಳ ಬಳಿ ಹಾಗೂ ಕೆರೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಕೆರೆಗಳು ನೀರು ಹರಿದುಹೋಗುವ ಕಾಲುವೆಗಳಲ್ಲಿ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿ ಇನ್ನಿತರ ತ್ಯಾಜ್ಯ ತೆರವುಗೊಳಿಸಲು ಸಿಬ್ಬಂದಿ ನಿಯೋಜಿಸಿ ಶುಚಿಗೊಳಿಸುವ ಕೆಲಸವನ್ನು ವಲಯ ಮುಖ್ಯಸ್ಥರ ನೇತೃತ್ವದಲ್ಲಿ ನಡೆದಿದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರಿತ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net