ನ್ಯಾ.ಕುನ್ಹಾ ಆಯೋಗದ ಅವಧಿ ವಿಸ್ತರಣೆ

Vidhanasoudha
Published on

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ರೋಗಿಗಳ ಸಾವಿನ ತನಿಖೆ ನಡೆಸುತ್ತಿರುವ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದ ವಿಚಾರಣಾ ಆಯೋಗದ ಅವಧಿಯನ್ನು ಒಂದು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ. ಆಯೋಗ ಆ.1ಕ್ಕೆ ವರದಿ ನೀಡಬೇಕಿತ್ತು. ಆದರೆ ಇದೀಗ ಆ.31ರವರೆಗೆ ಅವಧಿ ವಿಸ್ತರಿಸಲಾಗಿದೆ.

ಕೋವಿಡ್-19 ತಡೆಗಟ್ಟುವಲ್ಲಿ ನಡೆದಿರುವ ಅವ್ಯವಹಾರದ ವಿಚಾರಣೆಗಾಗಿ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲೇ ವಿಚಾರಣಾ ಆಯೋಗದ ರಚಿಸಲಾಗಿದ್ದು, ಇದರ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿತ್ತು. ಬಳಿಕ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮರಣ ಹೊಂದಿರುವ ಘಟನೆಗೆ ಸಂಬಂಧಿಸಿದಂತೆ ವರದಿ ನೀಡಲು ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು.

ಇದೀಗ ಆರ್‌ಸಿಬಿ ತಂಡದ ವಿಜಯೋತ್ಸವ ಅಭಿನಂದನಾ ಸಮಾರಂಭದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಉಂಟಾಗಿ 11 ಮಂದಿ ಮೃತಪಟ್ಟ ಪ್ರಕರಣವನ್ನೂ ಕುನ್ಹಾ ವಿಚಾರಣಾ ಆಯೋಗಕ್ಕೆ ವಹಿಸಿ ಆ.1ರಿಂದ 31ರ ಒಳಗಾಗಿ ವರದಿ ಸಲ್ಲಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಈ ಕಾರಣಕ್ಕೆ ಚಾಮರಾಜನಗರ ಘಟನೆಯ ತನಿಖೆಗೆ ಅಡ್ಡಿ ಉಂಟಾಗುವ ಹಿನ್ನೆಲೆಯಲ್ಲಿ ಆಯೋಗದ ಅವಧಿ ವಿಸ್ತರಣೆ ಮಾಡಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net