ಬೆಂಬಲ ಬೆಲೆಗೆ ತೊಗರಿ ಖರೀದಿ ಅವಧಿ ವಿಸ್ತರಣೆ: ಸಚಿವ ಶಿವಾನಂದ ಪಾಟೀಲ | 93000 metric tons of procure pending

shivanand-patildh-1538045446
Published on

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಅವಧಿಯನ್ನು ಇದೇ ಮೇ 1 ರಿಂದ ಮೇ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾಹಿತಿ ನೀಡಿದ್ದಾರೆ.

ನಿಗದಿತ ಖರೀದಿ ಪ್ರಮಾಣ ಇನ್ನೂ ಆಗದ ಕಾರಣ ಖರೀದಿ ಅವಧಿ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಒಂದು ತಿಂಗಳು ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ 3.06 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮತಿ ನೀಡಿದೆ.

ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ಇದುವರೆಗೆ 1.83 ಲಕ್ಷ ಮೆಟ್ರಿಕ್ ಟನ್ ಖರೀದಿಸಿದ್ದು, ಇನ್ನೂ 2.70 ಲಕ್ಷ ಮೆಟ್ರಿಕ್ ಟನ್ ಪ್ರಮಾಣದಷ್ಟು ತೊಗರಿ ಮಾರಾಟಕ್ಕೆ ರೈತರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಸುಮಾರು 93 ಸಾವಿರ ಮೆಟ್ರಿಕ್ ಟನ್ ಖರೀದಿಸಬೇಕಾಗಿದೆ ಎಂದಿದ್ದಾರೆ.

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ನಿಗದಿಪಡಿಸಿದ್ದ 7,550 ರೂ. ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರ 450 ರೂ. ಪ್ರೋತ್ಸಾಹಧನ ನೀಡುತ್ತಿದೆ. ಒಟ್ಟು ಪ್ರತಿ ಕ್ವಿಂಟಾಲ್‌ಗೆ ಎಂಟು ಸಾವಿರ ರೂ.ಗಳಂತೆ ಖರೀದಿ ಮಾಡಲಾಗುತ್ತಿದೆ. ರೈತರು ಈ ಅವಕಾಶ ಬಳಕೆ ಮಾಡಿಕೊಂಡು ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ತೊಗರಿ ಮಾರಾಟ ಮಾಡಬಹುದು ಎಂದು ಸಚಿವ ಶಿವಾನಂದ ಪಾಟೀಲ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net