

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆಯಾಗಿದೆ. ಸೆ.೩೦ರವರೆಗೂ ವಿಸ್ತರಣೆ ಮಾಡಲಾಗಿದೆ.
ಪ್ರಕರಣದ ಆರೋಪಪಟ್ಟಿ ಸಲ್ಲಿಕೆಯಾದ ಬಳಿಕ ನ್ಯಾಯಾಲಯವು ದರ್ಶನ್ ಮತ್ತು ಸಹಚರರನ್ನು ಸೆ.೧೨ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ನಂತರ ಮತ್ತೆ ನ್ಯಾಯಾಂಗ ಬಂಧನ ಅವಧಿಯನ್ನು ಸೆ.೧೭ರವರೆಗೆ ವಿಸ್ತರಿಸಲಾಗಿತ್ತು. ನ್ಯಾಯಾಂಗ ಬಂಧನ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಎಲ್ಲಾ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ೨೪ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರುಪಡಿಸಲಾಯಿತು.
ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಬಳ್ಳಾರಿ ಜೈಲಿನಲ್ಲಿರುವ ತಮ್ಮ ಕಕ್ಷಿದಾರರು ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಆದರೂ ಪ್ಲಾಸ್ಟಿಕ್ ಕುರ್ಚಿಯ ವ್ಯವಸ್ಥೆ ಮಾಡಲು ಆಗಲ್ಲ ಎಂದು ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಆ ವ್ಯವಸ್ಥೆ ಇದೆ. ಆದರೆ, ದರ್ಶನ್‌ಗೆ ಚೇರ್‌ನ ವ್ಯವಸ್ಥೆ ಮಾಡುತ್ತಿಲ್ಲ. ಸ್ನೇಹಿತರು ಹಾಗೂ ಕುಟುಂಬಸ್ಥರ ಭೇಟಿಗೂ ಅವಕಾಶ ಕೊಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಗ ನ್ಯಾಯಾಧೀಶರು ಕೈದಿಗಳಿಗೆ ಏನು ವ್ಯವಸ್ಥೆ ಮಾಡಬೇಕೆಂದು ಜೈಲು ಮ್ಯಾನ್ಯುಯಲ್‌ನಲ್ಲಿ ಇದೆ. ಆ ಪ್ರಕಾರ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸುತ್ತಾರೆ. ಕುರ್ಚಿ ಕೊಡುವಂತೆ ಅಧಿಕಾರಿಗಳಿಗೆ ಆದೇಶ ಮಾಡುತ್ತೇನೆ ಎಂದು ಹೇಳಿದರು.
ನ್ಯಾಯಾಲಯಕ್ಕೆ ತಾಂತ್ರಿಕ ಸಾಕ್ಷ್ಯಾಧಾರಗಳ ಜತೆಗೆ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (ಸಿಎ್ಎಸ್‌ಎಲ್) ವರದಿ ಸಲ್ಲಿಸಿದ ತನಿಖಾಧಿಕಾರಿಗಳು, ಕೆಲ ಸಾಕ್ಷ್ಯಗಳ ಸಂಗ್ರಹ ಆಗಬೇಕಾಗಿದೆ. ಪ್ರಕರಣದ ೧೦ನೇ ಆರೋಪಿ ವಿನಯ್‌ರ ಮೊಬೈಲ್ ಅನ್ನು ಮತ್ತೆ ಎ್ಎಸ್‌ಎಲ್ ಪರೀಕ್ಷೆಗೆ ಕಳುಹಿಸಬೇಕಿದೆ. ಹೀಗಾಗಿ, ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಧೀಶರು ಸೆ.೩೦ರವರೆಗೆ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶಿಸಿದರು.