

ಬೆಂಗಳೂರು: ಪೋಕ್ಸೋ ಪ್ರಕರಣದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸದಂತೆ ಹಾಗೂ ವಿಚಾರಣೆಗೆ ಹಾಜರಾಗಲು ಈ ಹಿಂದೆ ನೀಡಿದ್ದ ವಿನಾಯಿತಿಯನ್ನು ಹೈಕೋರ್ಟ್ ವಿಸ್ತರಿಸಿ ಆದೇಶಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಮತ್ತು ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ, ಅರ್ಜಿದಾರರ ಪರ ವಕೀಲರು ಅರ್ಜಿ ತಿದ್ದುಪಡಿಗಾಗಿ ಮನವಿ ಮಾಡಲಾಗಿದೆ. ಸರ್ಕಾರದಿಂದ ಇದಕ್ಕೆ ಆಕ್ಷೇಪವಿಲ್ಲದಿದ್ದಲ್ಲಿ ಕಾಲಾವಕಾಶ ನೀಡಬೇಕು ಎಂದರು.
ಇದಕ್ಕೆ ಪ್ರತಿಕ್ರಯಿಸಿದ ನ್ಯಾಯಪೀಠ, ‘ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ಅರ್ಜಿ ತಿದ್ದುಪಡಿಗೆ ಆಕ್ಷೇಪ ಇಲ್ಲವೇ’ಎಂದು ಕೇಳಿತು. ಇದಕ್ಕೆ ಸರ್ಕಾರದ ಪರ ವಕೀಲರು, ಆಕ್ಷೇಪಣೆ ಇಲ್ಲ ಎಂಬುದಾಗಿ ಹೇಳಿದರು. ನ್ಯಾಯಪೀಠ ವಿಚಾರಣೆಯನ್ನು ಆ. 22ಕ್ಕೆ ಮುಂದೂಡಿತು.