ಚೀನಾದಿಂದ ರಫ್ತು ಸ್ಥಗಿತ: ಗೊಬ್ಬರಗಳ ಬೆಲೆ ಏರಿಕೆ ಸಾಧ್ಯತೆ

Untitled design (7)
Published on

ನವದೆಹಲಿ: ಚೀನಾ ಅ. 15ರಿಂದ ಯೂರಿಯಾ ಮತ್ತು ವಿಶೇಷ ಗೊಬ್ಬರಗಳ ರಫ್ತನ್ನು ಸ್ಥಗಿತಗೊಳಿಸಿದ್ದು, ಭಾರತದಲ್ಲಿ ಗೊಬ್ಬರದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಚೀನಾ ಮೇ 15ರಿಂದ ಅ. 15ರವರೆಗೆ ತೀವ್ರ ತಪಾಸಣೆಯೊಂದಿಗೆ ಗೊಬ್ಬರ ರಫ್ತನ್ನು ಪುನರಾರಂಭಿಸಿತ್ತು. ಈಗ ಮುಂದಿನ ಸೂಚನೆಯವರೆಗೆ ರಫ್ತನ್ನು ಸ್ಥಗಿತಗೊಳಿಸಿದೆ. ಇದರಿಂದ ಭಾರತ ಮಾತ್ರವಲ್ಲದೆ ಇತರ ದೇಶಗಳ ಮಾರುಕಟ್ಟೆ ಮೇಲೂ ಪರಿಣಾಮ ಆಗುತ್ತದೆ. ಟೆಕ್ನಿಕಲ್ ಮೊನೊಅಮೋನಿಯಂ ಫಾಸ್ಪೇಟ್ (ಟಿಎಂಎಪಿ), ಆಡ್​ಬ್ಲ್ಯೂ, ಯೂರಿಯಾ, ಡಿಎಪಿ ಮುಂತಾದ ಗೊಬ್ಬರಗಳಿಗೆ ಇದು ಅನ್ವಯಿಸಲಿದೆ. ರಫ್ತು ಸ್ಥಗಿತ ಮುಂದಿನ 5-6 ತಿಂಗಳವರೆಗೆ ಇರಲಿದೆ.

ಈಗಾಗಲೇ ಜಾಸ್ತಿ ಇರುವ ವಿಶೇಷ ಗೊಬ್ಬರಗಳ ಬೆಲೆ ಶೇ. 10-15ರಷ್ಟು ಏರಿಕೆಯಾಗಬಹುದು ಎಂದು ಸೊಲ್ಯೂಬಲ್ ಫರ್ಟಿಲೈಜರ್ ಇಂಡಸ್ಟ್ರಿ ಅಸೋಸಿಯೇಷನ್ (ಎಸ್​ಎಫ್​ಐಎ) ಅಧ್ಯಕ್ಷ ರಾಜೀವ್ ಚಕ್ರವರ್ತಿ ಹೇಳಿದ್ದಾರೆ. ಭಾರತ ತನ್ನ ಅಗತ್ಯದ ಶೇ. 95ರಷ್ಟು ವಿಶೇಷ ಗೊಬ್ಬರಗಳನ್ನು, ಟಿಎಂಎಪಿಯಂತಹ ಫಾಸ್ಪೇಟ್​ಗಳು ಮತ್ತು ಆಡ್​ಬ್ಲ್ಯೂನಂತಹ ಎಮಿಷನ್ ಕಂಟ್ರೋಲ್ ಫ್ಲೂಯಿಡ್​ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ವಾರ್ಷಿಕ ಸುಮಾರು 2.5 ಲಕ್ಷ ಟನ್​ಗಳ ವಿಶೇಷ ಗೊಬ್ಬರ ಭಾರತದಲ್ಲಿ ಬಳಕೆಯಾಗುತ್ತದೆ.

ಇದರಲ್ಲಿ ಶೇ. 60-65ರಷ್ಟು ಅಕ್ಟೋಬರ್​ನಿಂದ ಮಾರ್ಚ್​ವರೆಗಿನ ರಬಿ ಋತುವಿನಲ್ಲಿ ಬಳಕೆ ಆಗುತ್ತದೆ. ವ್ಯಾಪಾರಿಗಳು ಈಗಾಗಲೇ ಜಾಗತಿಕ ವ್ಯಾಪಾರ ಸಂಸ್ಥೆಗಳ ಮೂಲಕ ಗೊಬ್ಬರ ತರಿಸಿಕೊಂಡಿರುವುದರಿಂದ ಚಾಲ್ತಿಯಲ್ಲಿರುವ ರಬಿ ಋತುವಿನ ಬೇಡಿಕೆ ಪೂರೈಸುವುದು ಸಮಸ್ಯೆಯಾಗದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಚೀನಾದ ರಫ್ತು ನಿರ್ಬಂಧಗಳು ಮಾರ್ಚ್ ನಂತರವೂ ಮುಂದುವರಿದರೆ, ಅದು ಆತಂಕ ಸೃಷ್ಟಿಸಬಹುದು ಎಂದು ಚಕ್ರವರ್ತಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net