

ಬೆಂಗಳೂರು: ಪೂರ್ವ ಆಫ್ರಿಕಾದ ರವಾಂಡದಲ್ಲಿ ಬಂಧನಕ್ಕೆ ಒಳಗಾಗಿದ್ದ ಲಷ್ಕರ್-ಎ-ತಯ್ಬ (ಎಲ್‌ಇಟಿ) ಸಂಘಟನೆ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕಸ್ಟಡಿಗೆ ಪಡೆದಿದೆ. ಸ್ಫೋಟಕ ವಸ್ತು ಎಲ್ಲಿಂದ ಯಾರಿಂದ ತಂದಿದ್ದ ಎಂಬುದರ ಬಗ್ಗೆ ಎನ್‌ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ವಿ.ನಾಗೇನಹಳ್ಳಿಯ ಮುನಿಯಪ್ಪ ಲೇಔಟ್ ಚರ್ಚ್ ಸಮೀಪ ನಿವಾಸಿ ಸಲ್ಮಾನ್ ಖಾನ್ ಅಲಿಯಾಸ್ ಸಲ್ಮಾನ್ ರೆಹಮಾನ್ ಖಾನ್ ಬಂಧಿತ.ನ.27ರಂದು ಪೂರ್ವ ಆಫ್ರಿಕಾದ ರವಾಂಡದಲ್ಲಿ ರವಾಂಡ ಇನ್ವೆಸ್ಟಿಗೇಷನ್ ಬ್ಯೂರೋ ಸಹಕಾರದಿಂದ ಎನ್‌ಐಎ ಮತ್ತು ಇಂಟರ್‌ಪೋಲ್ ಅಧಿಕಾರಿಗಳು ಬಂಧಿಸಿದ್ದರು. ಭಾರತಕ್ಕೆ ಕರೆತಂದು ಅಲ್ಲಿಂದ ಎನ್‌ಐಎ ಅಧಿಕಾರಿಗಳು ಬೆಂಗಳೂರು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ ಕಸ್ಟಡಿಗೆ ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿಸಿದ ಕೋರ್ಟ್, ಡಿ.9ರ ವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ 2008ರ ಸರಣಿ ಬಾಂಬ್ ಸ್ಫೋಟದ ರೂವಾರಿ, ಎಲ್‌ಇಟಿ ಮುಖಂಡ ಟಿ. ನಾಸೀರ್ ಪ್ರೇರಣೆಯಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದಲ್ಲಿ ಆತ್ಮಾಹುತಿ ಮತ್ತು ಉಗ್ರ ಚಟುವಟಿಕೆಗೆ ಸಂಚುರೂಪಿಸಿದ್ದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, 2023ರ ಜುಲೈ 18ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಕೊಡಿಗೇಹಳ್ಳಿ ಜಾಹೀದ್ ತಬ್ರೇಜ್, ಮನೆಯಲ್ಲಿ 4 ಜೀವಂತ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದ್ದವು. ಇನ್ನಿತರ ಶಂಕಿತರ ಬಳಿ 7 ನಾಡಾ ಪಿಸ್ತೂಲ್‌ಗಳು, 45 ಜೀವಂತ ಗುಂಡುಗಳು ವಾಕಿಟಾಕಿ ಸೆಟ್ಸ್ ಪತ್ತೆಯಾಗಿದ್ದವು.
ಈ ಎಲ್ಲ ಸ್ಫೋಟಕ ವಸ್ತುಗಳನ್ನು ಯಾರು ತಂದು ಕೊಟ್ಟವರು ಎಂಬುದರ ಹಿಂದೆ ಬಿದ್ದಾಗ ಸಲ್ಮಾನ್ ಖಾನ್ ಎಂಬಾತ ತಂದು ಬೇಗೂರಿನ ಮನೆಯೊಂದರ ಸಂಪ್‌ನಲ್ಲಿ ಇಟ್ಟಿದ್ದ.ಅಲ್ಲಿಂದ ತೆಗೆದುಕೊಂಡು ಬಂದು ಜಾಹೀದ್ ತಬ್ರೇಜ್ ಮನೆಯಲ್ಲಿ ಇಟ್ಟಿದ್ದಾಗಿ ಬಾಯ್ಬಿಟ್ಟಿದ್ದಾರೆ. ಆದರೆ, ಇದೀಗ ಸಲ್ಮಾನ್ ಖಾನ್‌ಗೆ ಸ್ಫೋಟಕ ವಸ್ತುಗಳು ಎಲ್ಲಿಂದ ಸರಬರಾಜು ಆಗಿದ್ದವು. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಎನ್‌ಐಎ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಎರಡು ಬಾರಿ ಜೈಲಿಗೆ :
2018ರಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸಲ್ಮಾನ್ ಖಾನ್, ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಟಿ. ನಾಸೀರ್ ಸಂಪರ್ಕವಾಗಿದ್ದ. ನಾಸೀರ್‌ನಿಂದ ಜಿಹಾದ್ ಬೋದನೆಗೆ ಒಳಗಾಗಿ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ. ಮತ್ತೆ ಕೊಲೆ ಕೇಸಿನಲ್ಲಿ 2022ರಲ್ಲಿ ಜೈಲು ಸೇರಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಸಾಗಾಟದ ಜವಾಬ್ದಾರಿ ವಹಿಸಿದ್ದ. ಮತ್ತೆ ವಿದೇಶಿ ಉಗ್ರರ ಲಿಂಕ್ ಪಡೆದು ತಲೆಮರೆಸಿಕೊಂಡು ದೇಣಿಗೆ ಸಂಗ್ರಹಿಸುತ್ತಿದ್ದ ಎನ್ನಲಾಗಿದೆ.