

ಬೆಂಗಳೂರು: ಹೋಟೆಲ್‌ನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಆಡುಗೋಡಿ ಸಮೀಪದ ಚಿಕ್ಕಲಕ್ಕಯ್ಯ ಬಡಾವಣೆಯಲ್ಲಿನ ಸಣ್ಣ ಹೋಟೆಲ್ನಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯಲ್ಲಿ ಸ್ಫೋಟವಾಗಿದೆ. ಹೋಟೆಲ್ ಮಾಲೀಕ ರವಿಕುಮಾರ್ (40) ಸಾವನ್ನಪ್ಪಿದ್ದು, ಸಹಾಯಕರಾದ ರಾಮು ಮತ್ತು ನಾಗರಾಜು ಎಂಬುವರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ವರ್ಷಗಳಿಂದ ರವಿಕುಮಾರ್, ಪೊಲಮ್ಮಾಸ್ ಎಂಬ ಆಂಧ್ರ ಮೆಸ್ ನಡೆಸುತ್ತಿದ್ದ. 1ನೇ ಮಹಡಿಯಲ್ಲಿ ಮೆಸ್ ಇದ್ದು, ಕೆಳ ಮಹಡಿಯಲ್ಲಿ ಉಳಿದುಕೊಳ್ಳಲು ಮನೆ ಮಾಡಿಕೊಂಡಿದ್ದರು. ಅಲ್ಲಿಯೇ ಸಿಲಿಂಡರ್‌ಗಳನ್ನು ಇಟ್ಟುಕೊಂಡಿದ್ದರು.
ಮೇಲಿರುವ ಮೆಸ್‌ಗೆ ಕೆಳಮಹಡಿಯಿಂದ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿತ್ತು. ಎಂದಿನಂತೆ ಗುರುವಾರ ಅಡುಗೆ ಮಾಡಲು ಶುರು ಮಾಡಿದಾಗ ಗ್ಯಾಸ್ ಖಾಲಿಯಾಗಿದೆ. ಸಿಲಿಂಡರ್ ಬದಲಾಯಿಸುವ ಸಲುವಾಗಿ ರಾಮು ಮತ್ತು ನಾಗರಾಜು ಬಂದಿದ್ದರು. ಸಿಲಿಂಡರ್ ಬದಲಾಯಿಸುವಾಗ ಪೈಪ್‌ಗೆ ಹಾನಿಯಾಗಿ ಸ್ಫೋಟವಾಗಿದೆ. ರಾಮು ಮತ್ತು ನಾಗರಾಜ್‌ಗೆ ಸುಟ್ಟ ಗಾಯವಾಗಿವೆ.
ಸ್ಫೋಟಗೊಂಡ ಸಿಲಿಂಡರ್ ಶೆಟರ್‌ಗೆ ಬಂಡಿದೆ. ಶೆಟರ್ ಬಳಿ ಮಲಗಿದ್ದ ರವಿಕುಮಾರ್‌ಗೆ ಕಬ್ಬಿಣ ಬಡಿದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಕ್ಕಪಕ್ಕದ ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.