

ಬೆಂಗಳೂರು: ಜೆಡಿಎಸ್‌ನವರಿಗೆ ಅಧಿಕಾರ ಮುಖ್ಯವೇ ಹೊರತು ಸಿದ್ಧಾಂತವಲ್ಲ. ಅವರನ್ನ ನಂಬಿ ಯಾರೂ ಇರಲು ಆಗುವುದಿಲ್ಲ. ಬಿಜೆಪಿಯವರು ಸಹ ಇರಲು ಆಗುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜತೆಗಿನ ಸಖ್ಯದ ಪ್ರತಿಫಲವನ್ನು ಈಗಲೇ ಬಿಜೆಪಿಯವರು ನೋಡುತ್ತಿದ್ದಾರೆ. ಮೈತ್ರಿಯಾಗಿದ್ದ ಕಾರಣಕ್ಕೆ ಕುಮಾರಸ್ವಾಮಿ ಮಂಡ್ಯದಲ್ಲಿ ಗೆದ್ದಿರೋದು. ಉಳಿದಂತೆ ಯಾವುದೇ ಬೇರೆ ಕಾರಣಗಳಿಲ್ಲ. ಈಗ ಅವರಲ್ಲಿ ಗೊಂದಲವಾದರೆ ನಮಗೆ ಅನುಕೂಲ ಆಗಲಿದೆ. ನಮ್ಮಲ್ಲಿ ಗೊಂದಲವಾದರೆ ಅವರಿಗೆ ಲಾಭವಾಗಲಿದೆ ಎಂದರು.
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಕರ್ನಾಟಕಕ್ಕೆ ಏನು ಮಾಡಿದ್ದಾರೆ? ಕೇಂದ್ರದಲ್ಲಿ ಕೆಲಸ ಮಾಡುವುದಕ್ಕಿಂತಲೂ ರಾಜಕೀಯ ಮಾಡುತ್ತಾರೆ. ಸಮುದಾಯದವರಿಗೆ ಭಾವನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಸಮುದಾಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದರು.
ಜಾತಿ ಗಣತಿ ಕುರಿತು ಪ್ರತಿಕ್ರಿಯೆ ನೀಡಿ, ಜಾತಿ ಗಣತಿ ವರದಿಯಲ್ಲಿ ಏನಿದೆ ಅನ್ನುವುದು ಯಾರಿಗೂ ಗೊತ್ತಿಲ್ಲ. ತುಂಬಾ ಶ್ರಮ ಹಾಕಿ ಸಮೀಕ್ಷೆ ನಡೆಸಿದ್ದಾರೆ. ಮೊದಲು ವರದಿಯಲ್ಲಿ ಏನಿದೆ ಎಂದು ನೋಡೋಣ ಎಂದು ಹೇಳಿದರು.