

ಬೆಂಗಳೂರು: ರಾಜ್ಯದಲ್ಲಿ ಕೆರೆಗಳ ಬರ್ ಜೋನ್ (ನಿರ್ಬಂಧಿತ ವಲಯ) ಗುರುತಿಸಿದ ಮಸೂದೆಗೆ ಸಂಬಂಧ ರಾಜ್ಯಪಾಲರಿಗೆ ಶೀಘ್ರವೇ ಮುಖ್ಯ ಕಾರ್ಯದರ್ಶಿ ಮುಖೇನ ಸ್ಪಷ್ಟನೆ ನೀಡಲಾಗುವುದು ಎಂದು ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಕೆರೆಗಳ ಬರ್ ಜೋನ್ ಸರಾಸರಿ 30 ಮೀಟರ್‌ಗಳಾಗಿದ್ದು, ದಶಕಗಳಷ್ಟು ಹಳೆಯದಾಗಿದೆ.
ಕೆರೆಗಳ ವಿಸ್ತೀರ್ಣಕ್ಕಿಂತ ನಿರ್ಬಂಧಿತ ವಲಯವೇ ಹೆಚ್ಚಿದೆ. ಮರು ವಿಮರ್ಶಿಸಿ ಅಭಿವೃದ್ಧಿ ಅಡಚಣೆ ನಿವಾರಿಸಲು ಕರಾವಳಿ ಹಾಗೂ ಉತ್ತರಕರ್ನಾಟಕದ ಜಿಲ್ಲೆಗಳ ಜನಪ್ರತಿನಿಧಿಗಳು ಪದೇ ಪದೆ ಮನವಿ ಮಾಡಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿತ ಸಮಿತಿ ವರದಿ, ಶಿಾರಸು ಪ್ರಕಾರ ರೂಪಿಸಿದ ಮಸೂದೆಯನ್ನು ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ.
ಬೆಂಗಳೂರು ಕೆರೆಗಳ ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಆಕ್ಷೇಪಿಸಿತ್ತು. ವಿಧೇಯಕಕ್ಕೆ ಅಂಕಿತ ಹಾಕಬಾರದು ಎಂದು ಪರಿಸರವಾದಿಗಳು, ನಾಗರಿಕರ ಗುಂಪು ರಾಜ್ಯಪಾಲರಿಗೆ ಸಲ್ಲಿಸಿದ ಆಕ್ಷೇಪಣೆಯಲ್ಲೂ ಇದೇ ವಿಷಯ ಅಡಕವಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 41,849 ಕೆರೆಗಳಿವೆ. ಈ ಪೈಕಿ 22 ಸಾವಿರಕ್ಕೂ ಹೆಚ್ಚು ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದರೆ, ನಗರ-ಪಟ್ಟಣಗಳಲ್ಲಿ 2,200 ಹಾಗೂ ಬೆಂಗಳೂರು ನಗರದಲ್ಲಿ 187 ಕೆರೆಗಳಿವೆ ಎಂದು ಅಧಿಕೃತ ಅಂಕಿ-ಅಂಶಗಳು ಹೇಳುತ್ತವೆ.
ರಾಜ್ಯಪಾಲರು ಸ್ಪಷ್ಟೀಕರಣ ಬಯಸಿರುವ ‘ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ), ವಿಧೇಯಕ-2025ರಂತೆ 0.05 ಎಕರೆ ವಿಸ್ತೀರ್ಣದ ಕೆರೆಗೆ ಬರ್ ಜೋನ್ ಶೂನ್ಯ, 0.05 ರಿಂದ 0.10ರವರೆಗೆ ಒಂದು ಮೀಟರ್, 0.10 ರಿಂದ 1 ಎಕರೆವರೆಗೆ ಮೂರು ಮೀಟರ್, ಒಂದರಿಂದ 10 ಎಕರೆ- ಆರು, 10 ರಿಂದ 25ರವರೆಗೆ- 12, 25 ರಿಂದ 100 ಎಕರೆವರೆಗೆ 24 ಮತ್ತು 100 ಎಕರೆಗೆ ಮೇಲ್ಪಟ್ಟು ವಿಸ್ತೀರ್ಣದ ಕೆರೆಗೆ 30 ಮೀಟರ್ ಬರ್ ಜೋನ್ ನಿಗದಿಯಾಗಿದೆ.
ನಿಗದಿತ ಬರ್ ಜೋನ್ ಜಾಗವನ್ನು ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ವಿದ್ಯುತ್ ಉಪ ಕೇಂದ್ರ ಇನ್ನಿತರ ಸಾರ್ವಜನಿಕ ಉದ್ದೇಶಿತ ನಿರ್ಮಾಣಗಳಿಗೆ ಅವಕಾಶವಿರಲಿದೆ. ಬೆಂಗಳೂರು ನಗರ ಕೆರೆಗಳಿಗೆ 100 ಮೀಟರ್ ಬರ್ ಜೋನ್ ನಿಗದಿಗೆ ಒತ್ತಾಯಿಸಲಾಗುತ್ತಿದೆ.
ಸ್ಯಾಂಕಿ, ಹಲಸೂರು ಇತ್ಯಾದಿ ಕೆರೆಗಳ ಸುತ್ತಮತ್ತ ಅನೇಕ ಅಭಿವೃದ್ಧಿ ಕೆಲಸಗಳಾಗಿದ್ದು, ಬರ್ ಜೋನ್ ವಿಸ್ತರಣೆಗೆ ಜಾಗವೇ ಇಲ್ಲ. ಈಗಿರುವುದನ್ನೇ ಸಂರಕ್ಷಿಸಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸಚಿವ ಎನ್.ಎಸ್.ಬೋಸರಾಜು ವಿವರಿಸಿದರು.