

ಬೆಂಗಳೂರು: ಅಂಧ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಂತೆ ‘ಟಾಕಿಂಗ್ ಲ್ಯಾಪ್‌ಟಾಪ್’ ವಿತರಿಸಲು ಯಾವ ನೀತಿ ಅನುಸರಿಸಲಾಗುತ್ತಿದೆ ಹಾಗೂ ಕಳೆದ 2 ವರ್ಷಗಳಿಂದ ಬಾಕಿ ಇರುವ ಲ್ಯಾಪ್‌ಟಾಪ್‌ಗಳ ವಿತರಣೆಗೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ 1 ತಿಂಗಳೊಳಗೆ ಸಮಗ್ರ ಮಾಹಿತಿ ಒದಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕಳೆದ ಎರಡು ಶೈಕ್ಷಣಿಕ ವರ್ಷಗಳಿಂದ ಅಂಧ ವಿದ್ಯಾರ್ಥಿಗಳಿಗೆ ಉಚಿತವಾಗಿ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಿಲ್ಲ ಎಂದು ಆರೋಪಿಸಿ ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ವಕೀಲರು, ಹಿಂದಿನ ವರ್ಷಗಳಲ್ಲಿ ಹಲವು ಕಾರಣಗಳಿಂದ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲು ಸಾಧ್ಯವಾಗಿಲ್ಲ. ಈಗ ಟೆಂಡರ್ ಕರೆದು ಅವುಗಳ ವಿತರಣೆಗೆ ಕ್ರಮ ಕೈಗೊಳ್ಳುತ್ತಿದ್ದು, ಎರಡು ವರ್ಷ ಬಾಕಿ ಉಳಿಸಿಕೊಂಡಿದ್ದ ಲ್ಯಾಪ್‌ಟಾಪ್‌ಗಳನ್ನೂ ಒಟ್ಟಿಗೆ ವಿತರಿಸಲಾಗುವುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಟಾಕಿಂಗ್ ಲ್ಯಾಪ್‌ಟಾಪ್‌ಗಳ ವಿತರಣೆಗೆ ಪ್ರತಿವರ್ಷ ಯಾವ ನೀತಿ ಪಾಲಿಸಲಾಗುತ್ತಿದೆ, ಬಾಕಿ ಇರುವ ಲ್ಯಾಪ್‌ಟಾಪ್‌ಗಳ ವಿತರಣೆಗೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಜ.8ಕ್ಕೆ ಮುಂದೂಡಿತು.
ಅರ್ಜಿಯಲ್ಲೇನಿದೆ?: ಅಂಧ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ವಿತರಿಸುವ ಯೋಜನೆಯನ್ನು 2014ರ ಜುಲೈನಲ್ಲಿ ಜಾರಿಗೆ ತರಲಾಗಿತ್ತು. 2014ರಿಂದ 2017ರವರೆಗೆ ಕೆಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಆದರೆ, 2018-19 ಮತ್ತು 2019-20ನೇ ಶೈಕ್ಷಣಿಕ ವರ್ಷದಲ್ಲಿ ಲ್ಯಾಪ್‌ಟಾಪ್ ನೀಡಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಲ್ಯಾಪ್‌ಟಾಪ್ ವಿತರಿಸುವ ಪ್ರಕ್ರಿಯೆಗೆ ಈವರೆಗೆ ಚಾಲನೆ ಸಿಕ್ಕಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವರ್ಷದಿಂದ ವರ್ಷಕ್ಕೆ ಅನುದಾನವನ್ನೂ ಕಡಿತಗೊಳಿಸಲಾಗುತ್ತಿದ್ದು, 2014-15ರಲ್ಲಿ 4 ಕೋಟಿ ರೂ. ಇದ್ದ ಅನುದಾನವನ್ನು 2015-16ರಲ್ಲಿ 3.50 ಕೋಟಿಗೆ ಇಳಿಸಲಾಯಿತು. 2019-20ರಲ್ಲಿ ಕೇವಲ 2.41 ಕೋಟಿ ರೂ. ಅನುದಾನ ನೀಡಲಾಗಿದೆ. ಇದರಿಂದ, ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಸಿಗುತ್ತಿಲ್ಲ. ಆದ್ದರಿಂದ, 2018-19 ಮತ್ತು 2019-20ನೇ ಶೈಕ್ಷಣಿಕ ಸಾಲಿನ ಅಂಧ ವಿಧ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್‌ಟಾಪ್ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.