

ಹೊಸನಗರ: ಉತ್ತಮ ಔಷಧ ನೀಡಿ ಜನರ ಆರೋಗ್ಯ ಕಾಪಾಡಬೇಕಾದ ತಾಲೂಕಿನ ನಿಟ್ಟೂರಿನ ಆರೋಗ್ಯ ಇಲಾಖೆಯ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ, ಔಷಧ ಪತ್ತೆಯಾಗಿವೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ವರ್ಷಕ್ಕೂ ಮೊದಲೇ ಅವಧಿ ಮುಗಿದ ಔಷಧ, ಮಾತ್ರೆಗಳನ್ನು ನೀಡಲಾಗುತ್ತಿದೆ. ಅಲ್ಲದೇ ಆಸ್ಪತ್ರೆ ಕೊಠಡಿಗಳು ಸಹ ಸ್ವಚ್ಛತೆಯಿಲ್ಲದೆ ದುರ್ನಾತ ಬರುತ್ತದೆ. ಔಷಧ, ಮಾತ್ರೆಗಳನ್ನು ಮತ್ತಿತರ ವಸ್ತುಗಳನ್ನು ಬೇಕಾಬಿಟ್ಟಿ ಎಸೆಯಲಾಗಿತ್ತು.
ದೂರು ಬಂದ ಹಿನ್ನೆಲೆಯಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಮತ್ತು ಪಿಡಿಒ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು. ಔಷಧ ದಾಸ್ತಾನು ಕೊಠಡಿಯಲ್ಲಷ್ಟೇ ಅಲ್ಲ, ವೈದ್ಯರ ಕೊಠಡಿಯಲ್ಲಿ ಟೇಬಲ್ ಮೇಲೆ ಅವಧಿ ಮುಗಿದ ಔಷಧ, ಮಾತ್ರೆಗಳು ಸಿಕ್ಕಿವೆ. ಈ ಪೈಕಿ ಬಹುತೇಕ ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡುವಂಥವು. ಆಸ್ಪತ್ರೆಯಲ್ಲಿ ವೈದ್ಯರು ರಜೆ ಮೇಲೆ ತೆರಳಿದ್ದು, ಕೂಡಲೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ, ಸ್ಥಳಕ್ಕೆ ತಕ್ಷಣ ಬರುವಂತೆ ಒತ್ತಾಯಿಸಿದರು.
ವೈದ್ಯಾಧಿಕಾರಿ ಭೇಟಿ: ತಾಲೂಕು ವೈದ್ಯಾಧಿಕಾರಿ ಡಾ. ಸುರೇಶ್ ಸ್ಥಳಕ್ಕೆ ಆಗಮಿಸಿ ವಿಷಯವನ್ನು ಕೂಲಂಕಷವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಂಡು ವ್ಯವಸ್ಥೆ ಸರಿ ಪಡಿಸುವ ಭರವಸೆ ನೀಡಿದರು. ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ಶೆಟ್ಟಿ, ಉಪಾಧ್ಯಕ್ಷೆ ವಿನೋದಾ ಗುರುಮೂರ್ತಿ, ಪಂಚಾಯಿತಿ ಸದಸ್ಯರು, ಪಿಡಿಒ ಪವನಕುಮಾರ್ ಇದ್ದರು.