ಮುಗಿದ ಬಸ್ ಪಾಸ್ ಅವಧಿ, ಪದವಿ ವಿದ್ಯಾರ್ಥಿಗಳ ಪರದಾಟ

bus
Published on

ಬೆಂಗಳೂರು ರಾಜ್ಯದ ಪದವಿ ವಿದ್ಯಾರ್ಥಿಗಳ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಆಗಸ್ಟ್‌ಗೆ ಕೊನೆಯಾಗಲಿದೆ. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಆಗಸ್ಟ್‌ವರೆಗೆ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ.

ಕೊರೊನಾ ಸಮಯದಲ್ಲಿ ಏರುಪೇರಾದ ಶೈಕ್ಷಣಿಕ ವರ್ಷಗಳು ಇನ್ನೂ ಸರಿಹೋಗಿಲ್ಲ. ಪ್ರತಿ ಶೈಕ್ಷಣಿಕ ವರ್ಷಗಳು ಕನಿಷ್ಠ 2 ತಿಂಗಳ ಕಾಲ ವಿಳಂಬವಾಗುತ್ತಿದೆ. ಈ ವರ್ಷವೂ 2 ತಿಂಗಳು ವಿಳಂಬವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸಮಸ್ಯೆ ಎದುರಾಗಿದೆ.

ಸಾಮಾನ್ಯವಾಗಿ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವು ಆಗಸ್ಟ್‌ನಿಂದ ಜೂನ್ ಅವಧಿಯಲ್ಲಿ ನಡೆಯುತ್ತದೆ. ಆದರೆ, 2023-24ನೇ ಶೈಕ್ಷಣಿಕ ವರ್ಷವು ಕಳೆದ ಅಕ್ಟೋಬರ್‌ನಲ್ಲಿ ಆರಂಭವಾಗಿದೆ. ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ. ಈ ಕಾರಣದಿಂದ ಪದವಿ 2,4 ಮತ್ತು 6ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸಮಸ್ಯೆ ತಲೆದೋರಿದೆ. ಜುಲೈ ಮತ್ತು ಆಗಸ್ಟ್ 2 ತಿಂಗಳ ಕಾಲ ಬಸ್ ಪಾಸ್ ಅವಧಿಯನ್ನು ವಿಸ್ತರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

BCU Request Letter

ವಿದ್ಯಾರ್ಥಿನಿಯರು ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಅಡಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ (ಪುರುಷ) ಮಾತ್ರ ಸಮಸ್ಯೆ ಉಂಟಾಗಿದೆ. ಇದನ್ನು ಬಗೆಹರಿಸಲು ರಾಜ್ಯ ಸರ್ಕಾರವು ಮುಂದಾಗಬೇಕು ಎಂಬುದು ಒಕ್ಕೋರಲ ಆಗ್ರಹವಾಗಿದೆ.

ಬಿಎಂಟಿಸಿ ಎಂಡಿಗೆ ಪತ್ರ ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಬೆಂ.ನಗರ ವಿವಿ ಕುಲಸಚಿವರು ಪತ್ರ ಬರೆದಿದ್ದಾರೆ.

ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಜೂನ್ 30ಕ್ಕೆ ಅಂತ್ಯವಾಗಿದೆ. ಆದರೆ, ಈ ವಿದ್ಯಾರ್ಥಿಗಳ ಪರೀಕ್ಷೆಗಳು ಸೆಪ್ಟೆಂಬರ್ ಅಂತ್ಯದವರೆಗೆ ನಡೆಯಲಿದೆ. ಈ ವಿದ್ಯಾರ್ಥಿಗಳ ಬಸ್‌ಪಾಸ್ ಮಾನ್ಯತೆಯನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net