

ಶಿಕ್ಷಣವನ್ನು ಖಾಸಗೀಕರಣ ಮಾಡಲು ಬೇಕಾದ ಎಲ್ಲ ಅಂಶಗಳನ್ನು ಕೇಂದ್ರ ಸರ್ಕಾರ ಬಜೆಟ್ನಲ್ಲಿ ಸೇರಿಸಿದೆ. ಶಿಕ್ಷಣಕ್ಕೆ 99,300 ಕೋಟಿ ರೂ.ಗಳನ್ನು ಶಿಕ್ಷಣ ಕ್ಷೇತ್ರಕ್ಕೆ ಒದಗಿಸಿದ್ದು, ಕಳೆದ ಬಾರಿಗೆ ಹೋಲಿಸಿ ನೋಡಿದರೆ ಕೇವಲ ಶೇ.5.8 ಹೆಚ್ಚಳವಾಗಿದೆ. ಅತ್ಯಂತ ಅಪಾಯಕಾರಿ ಬೆಳವಣಿಗೆಯೆಂದರೆ ಶಿಕ್ಷಣಕ್ಕೆ ಹೊರಗಿನಿಂದ ಸಾಲ ಪಡೆಯುವ ಮತ್ತು ವಿದೇಶಿ ನೇರಬಂಡವಾಳ ಆಹ್ವಾನಿಸುವ ಪ್ರಸ್ತಾವನೆಯಾಗಿದೆ.
ಇದರಲ್ಲಿ ಸಮಗ್ರ ಶಿಕ್ಷಣಕ್ಕೆ ಮೀಸಲಿಟ್ಟಿರುವುದು 38,751 ಕೋಟಿ ರೂ. ಆತಂಕದ ವಿಷಯವೆಂದರೆ ಇದರಲ್ಲಿ ಶೇ.73 ಶಿಕ್ಷಣ ಸೆಸ್ನಿಂದ ಬರುತ್ತದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಬಜೆಟ್ನಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟ ಹಣ ಕಳೆದ ವರ್ಷ ಶೇ.3.5 ಇದ್ದದ್ದು, ಈ ಬಾರಿ ಶೇ.3.3ಕ್ಕೆ ಇಳಿದಿದೆ. ಶಿಕ್ಷಣಕ್ಕೆ ಹೂಡಿಕೆಯನ್ನು ಆದ್ಯತೀಕರಿಸದ ಕಾರಣ ಶಾಲಾ ಶಿಕ್ಷಣ ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆಗಳಾದ ಮೂಲ ಸೌಕರ್ಯ, ಲಕ್ಷಾಂತರ ಶಿಕ್ಷಕರ ಹುದ್ದೆಗಳು ಖಾಲಿ ಇರುವುದು, ಎಲ್ಲಕ್ಕಿಂತ ಮಿಗಿಲಾಗಿ ದೇಶದ ಸಂಸತ್ತು ಒಪ್ಪಿ ಜಾರಿಗೊಳಿಸಿದ ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನ ಮರೀಚಿಕೆಯಾಗುತ್ತದೆ.
ಪ್ರಾಥಮಿಕ ಶಿಕ್ಷಣ ಹಂತದಲ್ಲಿ 9 ಲಕ್ಷ ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ 1.5 ಲಕ್ಷ ಶಿಕ್ಷಕರ ಹುದ್ದೆ ಖಾಲಿ ಇವೆ. ಜಾಗತಿಕ ಶಿಕ್ಷಣ ಮೇಲುಸ್ತುವಾರಿ ವರದಿ ಅನ್ವಯ ಶೇ.30 ಹೆಣ್ಣು ಮಕ್ಕಳು ಶಾಲೆ ಮುಖವನ್ನೇ ನೋಡಿಲ್ಲ. ಈ ಸೌಲಭ್ಯಗಳನ್ನು ಒದಗಿಸದೆ ಗುಣಾತ್ಮಕ ಶಿಕ್ಷಣ ಸಾಧ್ಯವಿಲ್ಲ. ಒಟ್ಟಾರೆ ಈ ಆಯವ್ಯಯ
ಹಕ್ಕು ಆಧಾರಿತ ದೃಷ್ಟಿಕೋದಿಂದ ಶಿಕ್ಷಣದ ಹಕ್ಕನ್ನು ಸಾಕಾರಗೊಳಿಸಲು ಅಗತ್ಯವಿದ್ದ ಹಣ ಮೀಸಲಿಡುವ ಬದಲು ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ, ವಿದೇಶಿ ಸಾಲ ಪಡೆಯುವ ಪ್ರಸ್ತಾವನೆ, ಅವಕಾಶ ವಂಚಿತ ಸಮುದಾಯಕ್ಕೆ ನೇರ ಆನ್-ಲೈನ್ ಉನ್ನತ ಶಿಕ್ಷಣ, ವಿದೇಶಿ ನೇರ ಬಂಡವಾಳ ಹಾಗೂ ಸಾರ್ವಜನಿಕ -ಖಾಸಗಿ ಸಹಭಾಗಿತ್ವದ ಮೂಲಕ ಶಿಕ್ಷಣವನ್ನು ಪೂರ್ಣವಾಗಿ ಮುಕ್ತ ಮಾರುಕಟ್ಟೆಗೆ ತೆರೆದಿಡುವ ನೀಲಿ ನಕಾಶೆಯಂತಿದೆ.
| ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ