ತಜ್ಞ ಅಭಿಪ್ರಾಯ: ಕಂಪನಿಗಳ ಮೋಸ ಕ್ರಿಮಿನಲ್ ಅಲ್ಲ, ಸಿವಿಲ್!

COPPORATE
Published on

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಸರ್ಕಾರದ ಈ ಸಾಲಿನ ಮುಂಗಡಪತ್ರ ಮಂಡಿಸುವಾಗ ಸುಸ್ತಾಗಿ ಕುಳಿತುಬಿಟ್ಟರು, ಬಜೆಟ್ ಪೂರ್ಣಗೊಳಿಸುವ ಮುನ್ನ ನಿಃಶಕ್ತಿ ಅವರನ್ನು ಕಾಡುತ್ತಿತ್ತು. ಅವರು ಮಂಡಿಸಿದ ಬಜೆಟ್ ಕೂಡ ಸುಸ್ತಾಗಿತ್ತು. ಬಜೆಟ್​ನಲ್ಲಿ ದಮ್ ಇರಲಿಲ್ಲ. ಎಲ್ಲ ರ್ಚವಿತ ಚರ್ವಣವೇ. ಬಜೆಟ್​ಗೆ ಮುಂಚೆ ಹುಟ್ಟಿಕೊಂಡಿದ್ದ ಬಹಳ ನಿರೀಕ್ಷೆಗಳು ಟುಸ್ ಪಟಾಕಿ ಆಗಿದ್ದವು.

ಯಾರಿಗೂ ಸಮಾಧಾನ ತರಲಿಲ್ಲ ಎಂಬ ಭಾವನೆ ಮೂಡಿದಂತಿತ್ತು. ಮುಂದಿನ ಐದು ವರ್ಷಗಳು, ಹತ್ತು ವರ್ಷಗಳನ್ನು ಗಮನದಲ್ಲಿ ಇಟ್ಟುಕೊಂಡ ಬಜೆಟ್ ಇದು ಎನ್ನುವುದರ ಮೂಲಕ ವಿತ್ತ ಸಚಿವರು ಈ ವರ್ಷದ ಮಾತು ಬಿಟ್ಟುಬಿಡಿ ಎಂದು ಹೇಳಿದಂತಿತ್ತು.

ಬಜೆಟ್​ನ ಕೆಲ ಅಂಶಗಳು ಅಂದರೆ ಸಣ್ಣದಾದರೂ ದೊಡ್ಡದಾಗಿ ಗಮನ ಸೆಳೆಯುವ ವರಮಾನ ತೆರಿಗೆ ಲೆಕ್ಕಚಾರ. 15 ಲಕ್ಷ ರೂ.ವರೆಗಿನ ವರಮಾನದವರಿಗೆ ಹೊಸ ಯೋಜನೆಯಿಂದ ಅನುಕೂಲ, ಸರ್ಕಾರಕ್ಕೆ 40 ಸಾವಿರ ಕೋಟಿ ರೂಪಾಯಿ ಕಡಿತ ಅಂತೆ. ಡಿವಿಡೆಂಡ್ ವಿತರಣೆ ತೆರಿಗೆ -ಡಿಡಿಟಿ ಬಿಟ್ಟಿದ್ದರಿಂದ 25 ಸಾವಿರ ಕೋಟಿ ರೂ. ಖೋತಾ ಅಂತೆ. ಕಂಪನಿಗಳಿಗೆ ಈ ತಾಪತ್ರಯ ತಪ್ಪಿದೆ ಎಂಬುದು ವಿಶೇಷ. ಹೀಗೆ ಕಂಪನಿಗಳಿಗೆ ಕದ್ದುಮುಚ್ಚಿ ಅನೇಕ ಅನುಕೂಲ ನೀಡಿದ್ದೂ ಇದೆ. ಇನ್ನುಮುಂದೆ ಕಂಪನಿಯ ಹಣಕಾಸು ಮೋಸ ಕ್ರಿಮಿನಲ್ ಅಲ್ಲ, ಅದು ಸಿವಿಲ್!. ಅಂತೂ ಕಂಪನಿಗಳ ಬಜೆಟ್ ನೇಪಥ್ಯದಲ್ಲಿ ದೊಡ್ಡದಾಗಿ ಕೆಲಸ ಮಾಡಿರುವುದು ದಿನ ಕಳೆದಂತೆ ಹೋರಬೀಳಲಿದೆ.

ಸಣ್ಣ ಉದ್ದಿಮೆಗಳು 5 ಕೋಟಿ ರೂ.ವರೆಗೆ ವಹಿವಾಟು ನಡೆಸಿದರೆ ಆಡಿಟ್ ವರದಿ ಸಲ್ಲಿಸಬೇಕಿಲ್ಲ ಎಂಬುದು ಸಣ್ಣ ಉದ್ದಿಮೆದಾರರಿಗೆ ಸಂತಸದ ಸಂಗತಿ ಆದೀತು. ಅಂದಾಜು 100 ಡಿಡಕ್ಷನ್ ಹಾಗೂ ವಿನಾಯ್ತಿಗಳ ಪೈಕಿ 15 ಅನ್ನು ಕೈಬಿಡಲಾಗಿದೆ ಎಂಬುದರಲ್ಲಿ ಅನೇಕರಿಗೆ ಅನಾನುಕೂಲ ಆಗಬಹುದು. ಕೊನೆಯದಾಗಿ ವಿತ್ತೀಯ ಕೊರತೆ ಈ ಸಾಲಿನಲ್ಲಿ ಶೇ.3.8 ಆಗುವುದಾಗಿ ಹೇಳಿದ್ದಾಗಿದೆ. ಇಷ್ಟೂ ಸಾಲ ಹಾಗೂ ಬಡ್ಡಿ ಭಾರ ದೇಶದ ಮೇಲೆ ಹೆಚ್ಚುತ್ತದೆ. ಆದರೂ ಶೇ.6ರ ವಿತ್ತೀಯ ಕೊರತೆ ಕಾಣುತ್ತಿದ್ದ ನಮಗೆ ಶೇ.3.8 ಎಂಬುದು ದೊಡ್ಡದೇನಲ್ಲ. ಒಟ್ಟಿನಲ್ಲಿ ಬಂದ ಪುಟ್ಟ ಹೋದ ಪುಟ್ಟ ಅಂತಾರಲ್ಲ ಆ ಮಾದರಿಯಲ್ಲಿದೆ ಈ ಬಜೆಟ್.

| ಡಾ. ಕೆ. ವಿದ್ಯಾಶಂಕರ್, ಆರ್ಥಿಕ ಚಿಂತಕರು, ಹಿರಿಯ ಪತ್ರಕರ್ತರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net