ತಜ್ಙ ಅಭಿಪ್ರಾಯ: ಕೃಷಿಗೆ ಇನ್ನೂ ಬೇಕಿತ್ತು

KABBU
Published on

ಈ ಸಾಲಿನ ಮುಂಗಡ ಪತ್ರದಲ್ಲಿ ಕೃಷಿ ಬೆಳವಣಿಗೆಗೆ ಹದಿನಾರು ಅಂಶದ ಸೂತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಬೇಸಾಯ ಕ್ಷೇತ್ರಕ್ಕೆ 2.83 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಅವರು ಹೇಳಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. 20 ಲಕ್ಷ ರೈತರಿಗೆ ಸೋಲಾರ್ ಪಂಪ್​ಸೆಟ್​ಗಳನ್ನು ನೀಡುವುದರಿಂದ ಇಂಧನ ಕ್ಷೇತ್ರದಲ್ಲಿ ಗಮನೀಯ ಸುಧಾರಣೆ ಸಾಧ್ಯವಾಗುತ್ತದೆ.

ಅದರಿಂದ ಕೃಷಿಗೂ ಅನುಕೂಲವಾಗುತ್ತದೆ. 2022ಕ್ಕೆ ರೈತರ ಆದಾಯ ದ್ವಿಗುಣಕ್ಕೆ ಇದು ಪೂರಕವಾಗುತ್ತದೆ. ಕೃಷಿ ಆಧಾರಿತ ನವೋದ್ಯಮಗಳಿಗೆ ಐದು ವರ್ಷಗಳ ತೆರಿಗೆ ವಿನಾಯ್ತಿಯಿಂದ ಬಂಡವಾಳ ಹೂಡಿಕೆಗೆ ಅನುಕೂಲವಾಗುತ್ತದೆ. ಜೇನು ಉದ್ಯಮಕ್ಕೆ ಅವಕಾಶ ನೀಡಲು ಅನ್ನದಾತ ಶಕ್ತಿದಾತ, ಶೇ. 97ರಷ್ಟು ಗ್ರಾಮಗಳ ಸರ್ವಋತು ಅಭಿವೃದ್ಧಿ, ನೀರಾವರಿಗೆ ನೆರವು, ರಫ್ತು ಹಬ್​ಗಳ ಸ್ಥಾಪನೆ, ಉಡಾನ್ ಹಾಗೂ ಕಿಸಾನ್ ರೈಲು ಒಳ್ಳೆಯ ಯೋಜನೆಗಳು, ರೈತ ಮಹಿಳೆೆಯರಿಗೆ ಧಾನ್ಯಲಕ್ಷ್ಮಿ, ತೋಟಗಾರಿಕೆಯಲ್ಲಿ ಜಿಲ್ಲೆಗೊಂದು ಬೆಳೆ, ಶೂನ್ಯ ಬಂಡವಾಳ ಕೃಷಿ, ಅನಿವಾಸಿ ಭಾರತೀಯರಿಗೆ, ಮೀನುಗಾರಿಕೆಗೆ ನೆರವು ನೀಡುವ ಯೋಜನೆಗಳಿವೆ.

ಸಹಕಾರ ಸಂಘಗಳಿಗೆ ವಿಧಿಸಿರುವ ತೆರಿಗೆ ಶೇ. 30 ರಿಂದ 22ಕ್ಕೆ ಇಳಿಕೆ ಮಾಡಿರುವುದು ರೈತರಿಗೆ ಮತ್ತ್ತೊದು ರೀತಿಯಲ್ಲಿ ಅನುಕೂಲವಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಲು ಅವಕಾಶ ಕಲ್ಪಿಸಲಾಗಿದೆ. ಇಂಥ ಅನೇಕ ಕ್ರಮಗಳಿಂದ ಕೃಷಿ ಕ್ಷೇತ್ರವನ್ನು ಮೇಲೆತ್ತಲು ವಿತ್ತ ಸಚಿವರು ಸಾಕಷ್ಟು ಕಸರತ್ತು ಮಾಡಿದ್ದಾರೆ. ಕೃಷಿ ಹಾಗೂ ಪೂರಕ ಕ್ಷೇತ್ರಗಳ ಅಭಿವೃದ್ಧಿಯಾದರೆ ಅದರಿಂದ ಗ್ರಾಮೀಣಾಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕೃಷಿ ಹಾಗೂ ಅದಕ್ಕೆ ಪೂರಕವಾದ ವಲಯಕ್ಕೆ ಸಾಕಷ್ಟು ಆದ್ಯತೆ ನೀಡ ಲಾಗಿದೆ. ಆದರೂ ಈ ಕ್ಷೇತ್ರದಲ್ಲಿ ಉದ್ಯೋಗಸೃಷ್ಟಿ, ಮಾರುಕಟ್ಟೆ ಸೌಲಭ್ಯ, ಮಾರುಕಟ್ಟೆಗಳಿಗೆ ಮೂಲಸೌಕರ್ಯ, ರಫ್ತು ಹಾಗೂ ನೀರಾವರಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿತ್ತು. ಏಕೆಂದರೆ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಹೆಚ್ಚಿಸಬೇಕಾದರೆ ಆ ಕ್ಷೇತ್ರಗಳಿಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯವಾಗಿತ್ತು.

| ಡಾ. ಬಿ.ಎಲ್. ಪಾಟೀಲ್ ಪ್ರಾಧ್ಯಾಪಕರು, ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ವಿವಿ, ಧಾರವಾಡ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net