

ಮೈಸೂರು: ಇತ್ತೀಚೆಗೆ ರೇಷ್ಮೆ ಹುಳು ಗೂಡು ಕಟ್ಟಲು ವಿಫಲವಾಗುತ್ತಿರುವ ಸಮಸ್ಯೆಗಳು ಕಂಡು ಬರುತ್ತಿದ್ದು, ಹಿಪ್ಪುನೇರಳೆ ಗಿಡಕ್ಕೆ ವಿಷಕಾರಿ ರಾಸಾಯನಿಕ, ಕೀಟನಾಶಕ ಸಿಂಪಡಣೆಯೇ ಇದಕ್ಕೆ ಮೂಲ ಕಾರಣವಾಗಿದೆ. ರೇಷ್ಮೆ ಬೆಳೆಗಾರರು ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಶಿಫಾರಸು ಮಾಡಿದ ಕೀಟನಾಶಕ ಹಾಗೂ ಪೋಷಕಾಂಶಗಳನ್ನು ಮಾತ್ರ ಬಳಕೆ ಮಾಡಬೇಕು ಎಂದು ಸಂಸ್ಥೆಯ ನಿರ್ದೇಶಕ ಡಾ.ಎಸ್. ಗಾಂಧಿದಾಸ್ ಹೇಳಿದರು.
ರೇಷ್ಮೆ ಹುಳು ಗೂಡು ಕಟ್ಟದೆ ಇಳುವರಿ ನಷ್ಟವಾಗುತ್ತಿರುವ ಉದಾಹರಣೆ ಶೇ.5 ರಷ್ಟು ರೈತರ ಜಮೀನಿನಲ್ಲಿ ಕಂಡುಬಂದಿದೆ. ಹಿಪ್ಪುನೇರಳೆ ಜಮೀನು, ಅಕ್ಕಪಕ್ಕದ ಜಮೀನುಗಳಲ್ಲಿ ನಿಷೇಧಿತ ರಾಸಾಯನಿಕ ಬಳಕೆ ಮಾಡಲಾಗುತ್ತಿದ್ದು, ನಿಷೇಧಿತ ರಾಸಾಯನಿಗಳನ್ನು ಯಾವುದೇ ಕಾರಣಕ್ಕೂ ಹಿಪ್ಪುನೇರಳೆ ಗಿಡಕ್ಕೆ ಬಳಕೆ ಮಾಡಬಾರದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅಕ್ಕಪಕ್ಕದ ಜಮೀನಿನವರು ಕೀಟನಾಶಕ ಸಿಂಪಡಣೆಗೆ ಡ್ರೋನ್ ಬಳಸಿದರೆ ಸುಲಭವಾಗಿ ಪಕ್ಕದಲ್ಲಿರುವ ಹಿಪ್ಪು ನೇರಳೆಯ ಜಮೀನಿನ ಮೇಲೆ ಕೀಟನಾಶಕ ಸಿಂಪಡಣೆಯಾಗುವ ಸಾಧ್ಯತೆ ಹೆಚ್ಚಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು. ಹಿಪ್ಪುನೇರಳೆ ಬೇಸಾಯ ವೇಳೆ ಪರಿಸರ ಸ್ನೇಹಿ ವಿಧಾನ ಅನುಸರಿಸಬೇಕು. ಯಾವುದಾದರೂ ಇತರೆ ಬೆಳೆ ಬೆಳೆದಿದ್ದ ಜಮೀನಿನಲ್ಲಿ ದಿಢೀರನೆ ಹಿಪ್ಪನೇರಳೆ ಬೇಸಾಯ ಕೈಗೊಳ್ಳುವ ಮೊದಲು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.