

ಸೊರಬ: ಪಕ್ಷದ ಶಿಸ್ತಿಗೆ ಧಕ್ಕೆ ಉಂಟುಮಾಡುತ್ತಿರುವ ಮತ್ತು ಮಾಜಿ ಸಚಿವ ಕುಮಾರ್ ಬಂಗಾರಪ್ಪ ವಿರುದ್ಧ ಕೆಲಸ ಮಾಡುತ್ತಿರುವ ನಮೋ ವೇದಿಕೆ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಒತ್ತಾಯಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಕಳೆದ 5 ವರ್ಷಗಳಿಂದ ಪಕ್ಷದ ಹಿನ್ನಡೆಗೆ ಕಾರಣವಾಗಿರುವ ಹಾಗೂ ಕುಮಾರ್ ಬಂಗಾರಪ್ಪ ಅವರ ಸೋಲಿಗೆ ಪಿತೂರಿ ನಡೆಸಿರುವ ನಮೋ ವೇದಿಕೆ ಮುಖಂಡರಿಗೆ ಸಂಘಟನಾ ಅಭಿಯಾನದ ಜವಾಬ್ದಾರಿ ನೀಡಲಾಗಿದೆ. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹಾಗೂ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಅವರು ತಮ್ಮ ಜವಾಬ್ದಾರಿಯ ಪ್ರಜ್ಞೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಮೋ ವೇದಿಕೆ ಮುಖಂಡರಾದ ಅರವಿಂದ್, ಯೋಗೇಶ್, ಗಜಾನನ ರಾವ್, ವಿಜಯೇಂದ್ರ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಇವರಿಗೆ ಸಂಘಟನಾ ಅಭಿಯಾನದಲ್ಲಿ ಮಣೆ ಹಾಕಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕೇವಲ ಎರಡು ಸ್ಥಾನ ಪಡೆದಿದ್ದು, ಆ ವರ್ಷವೇ ಜಿಲ್ಲಾಧ್ಯಕ್ಷರು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರಲ್ಲಿ ನಿರಾಸಕ್ತಿ ಎದ್ದು ಕಾಣುತ್ತಿದೆ. ಆದ್ದರಿಂದ ಪಕ್ಷದ ವರಿಷ್ಠರು ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷ ಸ್ಥಾನದಿಂದ ಇಬ್ಬರನ್ನೂ ಕೆಳಗಿಳಿಸಿ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ನಮೋ ವೇದಿಕೆ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು.
ಕುಮಾರ್ ಬಂಗಾರಪ್ಪ ಅವರು ಶಾಸಕರಾಗಿದ್ದ ಅವಧಿಯಲ್ಲಿ ಪಕ್ಷಕ್ಕೆ ಮುಜುಗರ ಆಗದಂತೆ ಉತ್ತಮ ಆಡಳಿತ ನಡೆಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಏಳಿಗೆ ಸಹಿಸದ ವಿರೋಧಿ ಗುಂಪು ಪಕ್ಷ ಒಡೆಯುವ ಕೆಲಸ ಮಾಡುತ್ತಿದೆ ಎಂದರು.
ಬಗರ್‌ಹುಕುಂ ಸಮಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಬಣ ರಾಜಕಾರಣದಿಂದ ಸಹಕಾರ ಸಂಘದ ನಿರ್ದೇಶಕ ಹಾಗೂ ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೂ ಮುನ್ನ ಪಕ್ಷದಲ್ಲಿನ ಒಡಕುಗಳನ್ನು ಬಗೆಹರಿಸಲು ವರಿಷ್ಠರು ಆಸಕ್ತಿ ತೋರಬೇಕು ಎಂದು ಹೇಳಿದರು.
ಮುಖಂಡರಾದ ಮಲ್ಲಿಕಾರ್ಜುನ, ಗುರುಕುಮಾರ್ ಪಾಟೀಲ್, ಗುಡ್ಡಪ್ಪ, ಶಿವನಗೌಡ, ಕೆ.ಜಿ.ಬಸವರಾಜ್ ರಂಗನಾಥ ಮೊಗವೀರ, ಶಿವಾನಂದಪ್ಪ, ಚಂದ್ರಪ್ಪ, ದಿವಾಕರ, ಗುರುಮೂರ್ತಿ, ಬಸವರಾಜ, ಪ್ರಕಾಶ್, ಪ್ರವೀಣ್, ಕೃಷ್ಣಮೂರ್ತಿ ಕೊಡಕಣಿ, ಕಿರಣಕುಮಾರ್ ಇತರರಿದ್ದರು.