

ವಿಜಯಪುರ: ರಾಜ್ಯದಲ್ಲಿ ಲೈನ್‌ಮನ್‌ಗಳ ಕೊರತೆ ಇದ್ದು, ಖಾಲಿ ಇರುವ ಹುದ್ದೇಗಳನ್ನು ತ್ವರಿತವಾಗಿ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಏಪ್ರೀಲ್ ಒಳಗಾಗಿ ಖಾಲಿ ಇರುವ ಲೈನ್‌ಮನ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದೆಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಆಗ್ರಹಕ್ಕೆ ಪೂರಕವಾಗಿ ಈ ಭರವಸೆ ನೀಡಿದರು.
ಲೈನ್‌ಮನ್‌ಗಳ ಸೇವೆ ಅನನ್ಯ. ಮಳೆಗಾಲದ ಸಂದರ್ಭ, ಪ್ರವಾಹ ಬಂದರೂ ನೆನೆದುಕೊಂಡು ಹೋಗಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿದ್ದಾರೆ. ಲೈನ್‌ಮನ್‌ಗಳ ಕಾರ್ಯ ಶ್ಲಾಘನೀಯ. ಇನ್ನಷ್ಟು ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದರು.
ಕಳೆದ ವರ್ಷ ಬರಗಾಲವಿದ್ದರೂ ಲೋಡ್‌ಶೆಡ್ಡಿಂಗ್ ಮಾಡಿಲ್ಲ. ಈ ಬಾರಿಯೂ ಬೇಸಿಗೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗಲಿದೆ. ಈಗಾಗಲೇ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಶರಾವತಿಯಲ್ಲಿ ವಿದ್ಯುತ್ ಉತ್ಪಾದನೆಗೆ ಹರಿಸುವ ನೀರನ್ನೇ ಮರುಬಳಕೆ ಮಾಡಿ ಹೆಚ್ಚುವರಿಯಾಗಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಮೊದಲು 1000 ಮೆವ್ಯಾ ವಿದ್ಯುತ್ ಉತ್ಪಾದಿಸಲಾಗುತ್ತಿತ್ತು. ಸದ್ಯ 3000ಮೆವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅದೇ ರೀತಿ ಪಾವಗಡದಲ್ಲಿ ಸೌರ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸದ್ಯ 2000 ಮೆವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಮತ್ತೆ 2000 ಮೆವ್ಯಾ ವಿದ್ಯುತ್ ಉತ್ಪಾದಿಸಲು ಕ್ರಮ ವಹಿಸಲಾಗಿದೆ. ರೈತರು ಸಹ ಅಗತ್ಯ 10ಸಾವಿರ ಎಕರೆ ಜಮೀನು ಲೀಸ್ ಮೇಲೆ ನೀಡಲು ಮುಂದೆ ಬರುತ್ತಿದ್ದಾರೆ. ಇದೊಂದು ರೈತರು ಮತ್ತು ಸರ್ಕಾರದ ಸಹಭಾಗಿತ್ವದ ಯೋಜನೆ ಎಂದರು.
ಅಲ್ಲದೇ, ಬೆಳಗಿನ ಜಾವ ವಿದ್ಯುತ್ ಪೂರೈಕೆಗೆ ಹೆಚ್ಚಿನ ಬೇಡಿಕೆ ಬಂದಿದೆ. ಹೀಗಾಗಿ 10 ಸಾವಿರ ಮೆವ್ಯಾ ವಿದ್ಯುತ್ ಸಂಗ್ರಹಣ ಸಾಮರ್ಥ್ಯದ ಬ್ಯಾಟರಿ ಅಳವಡಿಸಿ ಅಲ್ಲಿಂದ ಈಗಾಗಲೇ ಅಳವಡಿಕೆಯಾದ ಪರಿವರ್ತಕದ ಲೈನ್ ಬಳಸಿ ವಿದ್ಯುತ್ ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದರು.
ಕುಸುಮ-ಸಿ ಯೋಜನೆಯಡಿ ಖಾಸಗಿಯವರಿಂದ ಕಡಿಮೆ ದರದಲ್ಲಿ ವಿದ್ಯುತ್ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಒಂದು ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಕೇಂದ್ರಕ್ಕೆ 4 ಎಕರೆ ಜಾಗ ಬೇಕಿದ್ದು, ಸರ್ಕಾರಿ ಜಾಗ ಬಳಸಲು ಅಥವಾ ಖಾಸಗಿ ಜಮೀನು ಲೀಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು 3 ಸಾವಿರ ಮೆವ್ಯಾ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಕ್ರಮ-ಸಕ್ರಮ ಯೋಜನೆಯಡಿ ಈ ಹಿಂದೆ 4.5 ಲಕ್ಷ ಅರ್ಜಿಗಳು ಬಂದಿದ್ದವು. ಇದೀಗ ಹೊಸದಾಗಿ 26 ಸಾವಿರ ಅರ್ಜಿಗಳು ಬಂದಿವೆ. ಈ ಕುರಿತು ಪರಿಶೀಲನೆ ನಡೆದಿದೆ. ಸ್ಥಳೀಯವಾಗಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಗೃಹಜ್ಯೋತಿ ಯೋಜನೆ ಮೂಲಕ 2.62 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಇದಕ್ಕೆ 10-12 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಬಡವರು ಮತ್ತು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಕೊಡುತ್ತಿದ್ದೇವೆ. ಇದು ಪ್ರತಿಯೊಬ್ಬರಿಗೆ ಅಲ್ಲ. ಇದರಲ್ಲೂ ಮನೆಗೆ ಸರಾಸರಿ 50 ಯೂನಿಟ್ ವಿದ್ಯುತ್ ಮಾತ್ರ ಬೇಕಾಗುತ್ತದೆ. ಆದರೂ, ಶೇ.10ರಷ್ಟು ಹೆಚ್ಚುವರಿ ವಿದ್ಯುತ್ ಸಹ ನೀಡಲಾಗುತ್ತಿದೆ. ಇದರಿಂದ ಜನರು ಸಂತೋಷವಾಗಿದ್ದಾರೆ ಎಂದರು.
ದೇಶದಲ್ಲಿಯೇ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೂ, ರಾಜ್ಯದ ಪಾಲಿನ ಜಿಎಸ್‌ಟಿ ಅನುದಾವನ್ನು ಕೇಂದ್ರ ಸರ್ಕಾರ ಕೊಡುತ್ತಿಲ್ಲ. 4.20 ಲಕ್ಷ ಕೋಟಿ ರೂ.ಗಳಷ್ಟು ಜಿಎಸ್‌ಟಿ ನೀಡುತ್ತಿದ್ದೇವೆ. ಆದರೆ, ನಮಗೆ ಮರಳಿ 50ರಿಂದ 60 ಕೋಟಿ ರೂ. ಮಾತ್ರ ನೀಡುತ್ತಿದೆ. ಇದರಿಂದ ನಮಗೆ ತೊಂದರೆಯಾಗಿದೆ. ಸರಿಯಾದ ಜಿಎಸ್‌ಟಿ ಪಾಲು ಕೊಟ್ಟರೆ, ನಮಗೆ ಅನುಕೂಲವಾಗುತ್ತದೆ. ಬಿಹಾರ, ಉತ್ತರ ಪ್ರದೇಶ ರಾಜ್ಯಗಳಿಗೆ ಅನುದಾನ ಕೊಡಲಿ, ಇದಕ್ಕೆ ನಮ್ಮ ತಕಾರರು ಇಲ್ಲ. ಆದರೆ, ನಾವು ಕೊಡುತ್ತಿರುವ ತೆರಿಗೆಗೆ ಸೂಕ್ತವಾದ ಅನುದಾನವನ್ನೂ ಕೇಂದ್ರ ವಾಪಸ್ ಕೊಡಬೇಕು ಎಂದರು.
ಸಂಸದ ರಮೇಶ ಜಿಗಜಿಣಗಿ, ಸಚಿವ ಶಿವಾನಂದ ಪಾಟೀಲ, ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಶಾಸಕ ಅಶೋಕ ಮನಗೂಳಿ, ವಿಠಲ ಕಟಕದೊಂಡ ಮಾತನಾಡಿ, ಜಿಲ್ಲೆಯ ಹಾಗೂ ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು. ಜಿಲ್ಲಾಧಿಕಾರಿ ಟಿ.ಭೂಬಾಲನ್, ಸಿಇಒ ರಿಷಿ ಆನಂದ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮತ್ತಿತರರಿದ್ದರು.