ಸೆಸ್ ಹಣ ಇರುವುದು ಐಷಾರಾಮಿ ಓಡಾಟಕ್ಕಲ್ಲ : ಅಧಿಕಾರಿಗಳಿಗೆ ಹೈಕೋರ್ಟ್ ತರಾಟೆ

highcourt
Published on

ಬೆಂಗಳೂರು : ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಧಿಯಲ್ಲಿ ಸಂಗ್ರಹವಾಗುವ ಸೆಸ್ ಹಣವನ್ನು ಕಾರ್ಮಿಕರ ಕಲ್ಯಾಣ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕೇ ಹೊರತು ಮಂಡಳಿಯ ಅಧಿಕಾರಿಗಳ ಐಷಾರಾಮಿ ಓಡಾಟಕ್ಕಲ್ಲ ಎಂದು ಹೈಕೋರ್ಟ್ ಖಾರವಾಗಿ ಹೇಳಿದೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮೀಸಲಾದ ಹಣವನ್ನು ಶೈಕ್ಷಣಿಕ ಧನಸಹಾಯ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಹಾಗೂ ಇತರ ಮೂವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರು ಕಲ್ಯಾಣ ಮಂಡಳಿಯು ಈಗಾಗಲೇ 6 ಲಕ್ಷ ವಿದ್ಯಾರ್ಥಿಗಳಿಗೆ ₹ 500 ಕೋಟಿ ಶೈಕ್ಷಣಿಕ ಸಹಾಯಧನ ವಿತರಿಸಿದೆ. ಕಟ್ಟಡ ಕಾರ್ಮಿಕರಿಗಾಗಿ ಮಂಡಳಿಯ ಮುಖಾಂತರ ಇನ್ನೂ 19 ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲ ಆದಿತ್ಯ ಚಟರ್ಜಿ ಅವರು 2019ರ ಸಿಎಜಿ ವರದಿಯ ಅನುಸಾರ ಕರ್ನಾಟಕ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯು ತನ್ನ ಆಡಳಿತಾತ್ಮಕ ವೆಚ್ಚವನ್ನು ಕಾನೂನಾತ್ಮಕವಾಗಿ ನಿಗದಿಪಡಿಸಿದ ಶೇ.5 ಮೀರಿ ಶೇ.9ರಿಂದ ಶೇ.72ರಷ್ಟು ಹೆಚ್ಚಾಗಿ ಖರ್ಚು ಮಾಡಿದೆ ಎಂದು ಆರೋಪಿಸಿದರು.

ಘಟನೋತ್ತರ ಅನುಮೋದನೆ ಮೂಲಕ ಮಂಡಳಿಯು ಇನ್ನೋವಾಕಾರುಗಳನ್ನು ಖರೀದಿಸಿದ್ದು, ಮಂಡಳಿಯ ನಿಧಿಯನ್ನು ಅನಗತ್ಯವಾಗಿ ಖರ್ಚು ಮಾಡಿದೆ. ಹೈಕೋರ್ಟ್‌ನ ಇದೇ ಪೀಠವು ನೀಡಿದ್ದ ಮಧ್ಯಂತರ ಆದೇಶದಂತೆ ಇಬ್ಬರು ವಿದ್ಯಾರ್ಥಿನಿಯರಿಗೆ ಇನ್ನು ಹಣ ಪಾವತಿ ಮಾಡಿಲ್ಲ ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು.

ವಾದಪ್ರತಿವಾದ ಆಲಿಸಿದ ಪೀಠವು ಕಲ್ಯಾಣ್ ಮಂಡಳಿಯಲ್ಲಿರುವ ಪ್ರತಿಯೊಂದು ರೂಪಾಯಿಯೂ ಬಡ ಕಾರ್ಮಿಕರ ಕಲ್ಯಾಣ ಮತ್ತು ಅವರ ಮಕ್ಕಳ ಶೈಕ್ಷಣಿಕ ಬದುಕಿಗೆ ವಿನಿಯೋಗ ಆಗಬೇಕು. ಮಂಡಳಿಯಲ್ಲಿ ಸಾವಿರಾರು ಕೋಟಿ ಸೆಸ್ ಇದ್ದರೂ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಶೇ.60-70 ಕಡಿತ ಮಾಡಿರುವ ಕ್ರಮವನ್ನು ಯಾವುದೇ ಕಾರಣದಿಂದಲೂ ಒಪ್ಪಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಮುಂದುವರೆದು, ಮಂಡಳಿಯಲ್ಲಿ ಈವರೆಗೂ ಮಾಡಲಾಗಿರುವ ಪ್ರತಿಯೊಂದು ಖರ್ಚಿನ ಲೆಕ್ಕವನ್ನು ಮುಂದಿನ ವಿಚಾರಣೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಜು.26ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net