ಬಿಸಿ ಕಲಾಪಕ್ಕೆ ವಿಪಕ್ಷ ತಾಲೀಮು; ನೀಟ್ ವಿವಾದ, ಮಾಲೀಕರ ಹೆಸರು ಪ್ರದರ್ಶನ ವಿಚಾರ ಚರ್ಚೆ ನಿರೀಕ್ಷೆ

ವಿಜಯವಾಣಿ (6)
Published on

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಭಾನುವಾರ ಇಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಹಲವು ವಿವಾದಾತ್ಮಕ ವಿಷಯಗಳ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷಗಳು ಆಗ್ರಹಿಸುವುದರಿಂದ ಕೋಲಾಹಲಕಾರಿ ಕಲಾಪಗಳಿಗೆ ಉಭಯ ಸದನಗಳು ಸಾಕ್ಷಿ ಆಗಲಿವೆ ಎಂಬ ಸುಳಿವು ದೊರಕಿದೆ. ನೀಟ್-ಯುಜಿ ಪರೀಕ್ಷಾ ಅವ್ಯವಹಾರಗಳು, ಪ್ರತಿಷ್ಠಿತ ನೀಟ್ ಸಹಿತ ಹಲವು ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಕನ್ವರ್ ಯಾತ್ರೆ ಮಾರ್ಗದಲ್ಲಿನ ಹೋಟೆಲ್​ಗಳ ಮಾಲೀಕರ ಹೆಸರು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿರುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಮೊದಲಾದ ವಿಷಯಗಳ ಚರ್ಚೆಗೆ ಅಧಿವೇಶನದಲ್ಲಿ ಅವಕಾಶ ಕಲ್ಪಿಸಬೇಕೆಂದು ಸಭೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷಗಳ ನಾಯಕರು ಆಗ್ರಹಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಕೃತ್ಯ, ಮಣಿಪುರ ಪರಿಸ್ಥಿತಿ, ರೈಲು ಅಪಘಾತಗಳು, ನಿರುದ್ಯೋಗ ಮತ್ತು ಬೆಲೆಯೇರಿಕೆ ಕುರಿತೂ ಚರ್ಚೆ ಅಗತ್ಯವೆಂದು ಪಕ್ಷಗಳು ಆಗ್ರಹಿಸಿದವು. ಇದುವರೆಗಿನ ಸಂಪ್ರದಾಯವನ್ನು ಮುರಿದ ಸರ್ಕಾರ, ಚಿಕ್ಕ ಪುಟ್ಟ ಪಕ್ಷಗಳನ್ನು ಕೂಡ ಸಭೆಗೆ ಆಹ್ವಾನಿಸುವ ಮೂಲಕ ರಾಜಕೀಯವಾಗಿ ಅವುಗಳನ್ನು ತಲುಪುವ ಆಕಾಂಕ್ಷೆಯನ್ನು ಪ್ರದರ್ಶಿಸಿತು. ಎಲ್ಲ ವಿಷಯಗಳನ್ನು ರ್ಚಚಿಸಲು ಸರ್ಕಾರ ಸಮ್ಮತಿಸಿತಾದರೂ ಎಲ್ಲವೂ ನಿಯಮಗಳಿಗೆ ಅನುಗುಣವಾಗಿರುವುದು ಅಗತ್ಯ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಖಡಕ್ಕಾಗಿ ಹೇಳಿದರು. ಕಲಾಪಗಳನ್ನು ಸುಗಮವಾಗಿ ನಡೆಸಲು ಎಲ್ಲ ಪಕ್ಷಗಳ ಸಹಕಾರ ಕೋರಿದ ರಿಜಿಜು, ಇದು ಸಾಮೂಹಿಕ ಹೊಣೆಗಾರಿಕೆ ಆಗಿದೆ ಎಂದು ಪ್ರತಿಪಾದಿಸಿದರು.

44 ಪಕ್ಷಗಳು: ಕೇವಲ ಒಬ್ಬ ಸಂಸದರನ್ನು ಹೊಂದಿರುವ ಪಕ್ಷಗಳ ಸಹಿತ ಒಟ್ಟು 44 ಪಕ್ಷಗಳು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದವು.

ಉಪ ಸ್ಪೀಕರ್ ಹುದ್ದೆ ವಿಚಾರ: ಲೋಕಸಭೆಯ ಉಪ ಸ್ಪೀಕರ್ ಹುದ್ದೆಯನ್ನು ಸಂಪ್ರದಾಯಕ್ಕನುಸಾರವಾಗಿ ಪ್ರತಿಪಕ್ಷಕ್ಕೆ ನೀಡಬೇಕೆಂಬ ಕಾಂಗ್ರೆಸ್ ಬೇಡಿಕೆಗೆ ಇಂಡಿಯಾ ಕೂಟದ ಇತರ ಸದಸ್ಯರು ಬೆಂಬಲ ಸೂಚಿಸಿದವು ಎಂದು ಕಾಂಗ್ರೆಸ್ ಮುಖಂಡ ಕೆ. ಸುರೇಶ್ ತಿಳಿಸಿದ್ದಾರೆ.

ಲೈವ್ ಟ್ವೀಟ್​ಗೆ ಬಿಜೆಪಿ ಖಂಡನೆ: ಸರ್ವಪಕ್ಷ ಸಭೆ ನಡೆಯುತ್ತಿರುವಾಗಲೇ ಅಲ್ಲಿ ಪ್ರಸ್ತಾಪವಾದ ಕೆಲವು ವಿಷಯಗಳ ಬಗ್ಗೆ ಕಾಂಗ್ರೆಸ್ ನೇತಾರ ಜೈರಾಮ್ ರಮೇಶ್ ‘ನೇರವಾಗಿ ಟ್ವೀಟ್’ (ಲೈವ್-ಟ್ವೀಟಿಂಗ್) ಮಾಡಿದ್ದನ್ನು ಬಿಜೆಪಿ ಟೀಕಿಸಿದೆ. ಮುಂದಿನ ಸಭೆಗೆ ಹೆಚ್ಚು ಪಕ್ವವಾದ ರಾಜಕಾರಣಿಯನ್ನು ಕಳಿಸುವುದನ್ನು ಪ್ರತಿಪಕ್ಷಗಳು ಪರಿಶೀಲಿಸುವುದು ಒಳ್ಳೆಯದು ಬಿಜೆಪಿ ಮುಖಂಡರು ಕಾಂಗ್ರೆಸ್​ನ ಕಾಲೆಳೆದಿದ್ದಾರೆ. ಇಂಥ ಸರ್ವಪಕ್ಷ ಸಭೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಔಚಿತ್ಯ ಮತ್ತು ಶಿಷ್ಟಾಚಾರ ಇರುತ್ತದೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.

ವಿಶೇಷ ಸ್ಥಾನಮಾನಕ್ಕೆ ಆಗ್ರಹ

ಬಿಜೆಪಿಯ ಮಿತ್ರಪಕ್ಷವಾದ ಜೆಡಿಯು ಮಾತ್ರವಲ್ಲದೆ ಬಿಜೆಡಿ ಮತ್ತು ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಅನುಕ್ರಮವಾಗಿ ಬಿಹಾರ, ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಒದಗಿಸುವಂತೆ ಆಗ್ರಹಿಸಿದವು. ಬಿಹಾರಕ್ಕೆ ವಿಶೇಷ ಸ್ಥಾನಮಾನ ಬೇಡಿಕೆಗೆ ವಿಪಕ್ಷ ಆರ್​ಜೆಡಿ ಕೂಡ ದನಿಗೂಡಿಸಿತು.

ಸಂಸತ್ ಕಲಾಪಗಳಲ್ಲಿ ಒಬ್ಬ ಸದಸ್ಯರು ಮಾತನಾಡುವಾಗ ಇತರರು ಮಧ್ಯಪ್ರವೇಶಿಸಬಾರದು ಹಾಗೂ ಅಡ್ಡಿಪಡಿಸಬಾರದು.

| ರಾಜನಾಥ ಸಿಂಗ್, ರಕ್ಷಣಾ ಸಚಿವ

ದೇಶದ ಪರಂಪರೆ ಇತಿಹಾಸವಷ್ಟೇ ಅಲ್ಲ ವಿಜ್ಞಾನವೂ ಹೌದು ಎಂದ ಪ್ರಧಾನಿ

ಪರಂಪರೆ ರಕ್ಷಣೆಯ ಪ್ರಯತ್ನಗಳಲ್ಲಿ ಜಾಗತಿಕ ಮಟ್ಟದ ಸಹಕಾರದ ಜೊತೆಗೆ ಸ್ಥಳೀಯ ಸಮುದಾಯಗಳನ್ನೂ ತೊಡಗಿಸಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವ ಪರಂಪರೆ ಸಮಿತಿಯ 46ನೇ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಪರಂಪರೆಯು ಕೇವಲ ಇತಿಹಾಸ ಅಲ್ಲ, ಅದು ವಿಜ್ಞಾನ ಕೂಡ ಹೌದು. ನಮ್ಮ ನಾಗರಿಕತೆಯು ಲಿಖಿತ ಇತಿಹಾಸದಲ್ಲಿ ದಾಖಲಾಗಿರುವುದ ಕ್ಕಿಂತಲೂ ಪ್ರಾಚೀನವಾದದ್ದು. ಎರಡು ಸಾವಿರ ವರ್ಷವಾದರೂ ತುಕ್ಕು ಹಿಡಿದ ಕಬ್ಬಿಣದ ಸ್ತಂಭವೇ ಭಾರತದ ಪ್ರಾಚೀನ ವೈಜ್ಞಾನಿಕ ಜ್ಞಾನಸಂಪತ್ತಿನ ದ್ಯೋತಕವಾಗಿದೆ. ಎಂಟನೇ ಶತಮಾನದಲ್ಲಿ ನಿರ್ವಿುಸಲಾದ ಕೇದಾರನಾಥ ದೇವಸ್ಧಾನ, ದಕ್ಷಿಣದ ಬೃಹದೀಶ್ವರ ದೇಗುಲ ಮುಂತಾದವು ಭಾರತದ ವಾಸ್ತುಶಿಲ್ಪ ಜ್ಞಾನಕ್ಕೆ ಹಿಡಿದ ಕನ್ನಡಿಗಳಾಗಿವೆ ಎಂದು ಬಣ್ಣಿಸಿದರು.

‘ಗುರುಪೂರ್ಣಿಮೆಯ ದಿನವೇ ಸಭೆ ಆರಂಭವಾಗುತ್ತಿರುವುದು ಅನ್ವರ್ಥಕವಾಗಿದೆ. ಎಲ್ಲ ದೇಶಗಳೂ ತಮ್ಮ ಪರಂಪರೆಯ ಪ್ರಚಾರಕ್ಕೆ ಮತ್ತು ಉತ್ತೇಜನಕ್ಕೆ ನೀಡುವಷ್ಟೇ ಮಹತ್ವವನ್ನು ಬೇರೆ ದೇಶಗಳ ಪರಂಪರೆಯನ್ನು ಪ್ರೋತ್ಸಾಹಿಸುವುದಕ್ಕೂ ನೀಡಬೇಕು. ಭಾರತವು ಅಭಿವೃದ್ಧಿಯ ಜತೆಗೆ ಪರಂಪರೆ ರಕ್ಷಣೆಗೂ ಅಷ್ಟೇ ಮಹತ್ವ ನೀಡಲಿದೆ’ ಎಂದು ಪ್ರಧಾನಿ ಹೇಳಿದರು.

ವಿದೇಶಗಳಲ್ಲಿದ್ದ ಭಾರತದ 350 ಪ್ರಾಚೀನ ವಸ್ತುಗಳನ್ನು ಇತ್ತೀಚಿನ ವರ್ಷಗಳಲ್ಲಿ ವಾಪಸ್ ಪಡೆಯಲಾಗಿದೆ. ಅಸ್ಸಾಂನ ಪ್ರಾಚೀನ ಸ್ಥಳವಾದ ಮೈದಾಮ್ ಈ ಬಾರಿ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರುವ ವಿಶ್ವಾಸವಿದೆ ಎಂದರು. ವಿಶ್ವ ಪರಂಪರೆ ತಾಣಗಳ ಪಟ್ಟಿಯನ್ನು ಪರಿಷ್ಕರಿಸುವ ದೃಷ್ಟಿಯಿಂದ ಸಮಿತಿಯ ಶೃಂಗಸಭೆ ಪ್ರತಿ ವರ್ಷ ನಡೆಯುತ್ತದೆ. ಇದೇ ಪ್ರಥಮ ಬಾರಿಗೆ ಭಾರತದಲ್ಲಿ ಈ ಸಭೆ ನಡೆಯುತ್ತಿದ್ದು, ಜು. 31ರವರೆಗೆ ಮುಂದುವರಿಯಲಿದೆ. ಯುನೆಸ್ಕೋ ಪದಾಧಿಕಾರಿಗಳು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net