

ಬೆಂಗಳೂರು: ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕೌನ್ಸೆಲಿಂಗ್ ಮುಖೇನ ವರ್ಗಾವಣೆ ಮಾಡಲು ಕರಡು ನಿಯಮಾವಳಿ ಸಿದ್ಧವಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾಹಿತಿ ನೀಡಿದ್ದಾರೆ.
ಕರ್ನಾಟಕ ನಾಗರಿಕ ಸೇವೆಗಳು (ಅಬಕಾರಿ ಇಲಾಖೆಯ ವರ್ಗಾವಣೆ) ನಿಯಮಗಳು, 2025ಕ್ಕೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ವರ್ಗಾವಣೆಯಲ್ಲಿ ಸುಧಾರಣೆ ಮತ್ತು ನಿಯಮಾಧಾರಿತ ವರ್ಗಾವಣೆ ಮೂಲಕ ಪಾರದರ್ಶಕತೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಅನುಮೋದಿತ ಕರಡು ನಿಯಮಾವಳಿಗೆ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ನಂತರ ಸಲ್ಲಿಕೆಯಾದ ಆಕ್ಷೇಪಣೆ, ಸಲಹೆಗಳನ್ನು ಪರಿಶೀಲಿಸಿ ಅಂತಿಮಗೊಳಿಸುವುದಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದಿದ್ದಾರೆ.
ಇಲಾಖೆಯಲ್ಲಿನ ಹುದ್ದೆಗಳನ್ನು ಕಾರ್ಯನಿರ್ವಾಹಕ ಮತ್ತು ಕಾರ್ಯನಿರ್ವಹಕೇತರ ಎಂದು ವಿಂಗಡಿಸಿ, ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು, ಮುಖ್ಯಪೇದೆ ಮತ್ತು ಪೇದೆಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.
ಅಲ್ಲದೆ, ಒಬ್ಬ ಅಧಿಕಾರಿ/ ಸಿಬ್ಬಂದಿಯನ್ನು ಸತತವಾಗಿ ಎರಡಕ್ಕಿಂತ ಹೆಚ್ಚು ಅವಧಿಗೆ ಕಾರ್ಯನಿರ್ವಾಹಕ ಹುದ್ದೆಗೆ ವರ್ಗಾಯಿಸುವಂತಿಲ್ಲ. ಹೊಸ ನಿಯಮದಲ್ಲಿ ಅಬಕಾರಿ ಅಧಿಕಾರಿಗಳ ವರ್ಗಾವಣೆ ಕಡ್ಡಾಯ ಪ್ರಸ್ತಾಪಿಸಲಾಗಿದೆ ಎಂದು ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅಬಕಾರಿ ಜಂಟಿ ಆಯುಕ್ತರು, ಉಪ ಆಯುಕ್ತರು, ಅಧೀಕ್ಷಕರು, ನಿರೀಕ್ಷಕರು ಮತ್ತು ಉಪ ನಿರೀಕ್ಷಕರನ್ನು ಸದರಿ ಜಿಲ್ಲೆಗಳು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗುತ್ತದೆ.
ಇಲಾಖೆ ಸಮವಸಾಧಾರಿತ ಮತ್ತು ನಿಯಂತ್ರಕ ಇಲಾಖೆ ಆಗಿರುವುದರಿಂದ ಹೊಸ ವರ್ಗಾವಣೆ ನಿಯಮಗಳಿಂದ ಇಲಾಖೆಯಲ್ಲಿನ ಜಾರಿ ಮತ್ತು ತನಿಖೆ ಪರಿಣಾಮಕಾರಿಯಾಗಲಿದೆ. ಕೌನ್ಸೆಲಿಂಗ್ ಮುಖೇನ ವರ್ಗಾವಣೆಯು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಇಲಾಖೆ ಆದಾಯ ಕೂಡ ಹೆಚ್ಚಿಸಲಿದೆ ಎಂಬ ಆಶಾಭಾವನೆಯನ್ನು ಸಚಿವ ಆರ್.ಬಿ.ತಿಮ್ಮಾಪುರ ವ್ಯಕ್ತಪಡಿಸಿದ್ದಾರೆ.
ಹೊಸ ನಿಯಮಾವಳಿ ಪ್ರಕಾರ ಅಬಕಾರಿ ಇಲಾಖೆಯ ವಿವಿಧ ವೃಂದದ ಅಧಿಕಾರಿಗಳು ಮತ್ತು ನೌಕರರು ನಿಯೋಜಿಸಿರುವ ಹುದ್ದೆಯಲ್ಲಿ ಪೂರೈಸಬೇಕಾದ ಕನಿಷ್ಠ ಸೇವಾ ಅವಧಿಯನ್ನು ಉಲ್ಲೇಖಿಸಲಾಗಿದೆ.
ಕಾರ್ಯನಿರ್ವಾಹಕ ಗ್ರೂಪ್-ಎ ಮತ್ತು ಬಿ ತಲಾ ಎರಡು ವರ್ಷಗಳು, ಗ್ರೂಪ್- ಸಿ ಮೂರು ವರ್ಷಗಳು ಮತ್ತು ಗ್ರೂಪ್-ಸಿ (ಅಬಕಾರಿ ಪೇದೆ, ಮುಖ್ಯಪೇದೆ ಜೇಷ್ಠತಾ ಘಟಕಕ್ಕೆ ಸಂಬಂಧಿಸಿದಂತೆ) ಐದು ವರ್ಷಗಳೆಂದು ಕನಿಷ್ಠ ಸೇವಾವಧಿಯನ್ನು ಪ್ರಸ್ತಾಪಿಸಲಾಗಿದೆ.