

ನವದೆಹಲಿ: ಕರೊನಾ ಸೋಂಕಿನಿಂದ ಬಚಾವ್ ಆಗಲು ಸ್ಯಾನಿಟೈಸರ್ ಬಳಕೆ ಕೂಡ ಒಂದು ಮಾರ್ಗ. ಆದರೆ ಅತಿಯಾಗಿ ಸ್ಯಾನಿಟೈಸರ್ ಬಳಸಿದರೆ ಅದು ಕೂಡ ಹಾನಿಕಾರಕವಾಗಿ ಪರಿಣಮಿಸಲಿದೆ!
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಮತ್ತು ಅಮೆರಿಕನ್ ಸೊಸೈಟಿ ಆಫ್ ಮೈಕ್ರೊಬಯಾಲಜಿ ಆಯೋಜಿಸಿದ್ದ ವೆಬಿನಾರ್ನಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಗಿದೆ. ಆ್ಯಂಟಿ ಬಯಾಟಿಕ್ ರೆಸಿಸ್ಟೆನ್ಸ್ ಕುರಿತು ನಡೆದ ಎರಡು ದಿನಗಳ ಅಂತಾರಾಷ್ಟ್ರೀಯ ವೆಬಿನಾರ್ನಲ್ಲಿ ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಬಗ್ಗೆ ವಿವಿಧ ವಿಚಾರಗಳು ಚರ್ಚೆ ಆಗಿವೆ.
ಅತಿಯಾದ ಸ್ಯಾನಿಟೈಸರ್ ಹಾಗೂ ಆ್ಯಂಟಿ ಮೈಕ್ರೋಬಿಯಲ್ ಸೋಪ್ಗಳ ಬಳಕೆಯಿಂದ ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಹೆಚ್ಚಾಗುವುದರಿಂದ ಪರಿಸ್ಥಿತಿ ಮತ್ತಷ್ಟು ವ್ಯತಿರಿಕ್ತವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆ್ಯಂಟಿ ಮೈಕ್ರೋಬಿಯಲ್ ಔಷಧಗಳಿಗೆ ರೋಗಕಾರಕ ಮೈಕ್ರೋಬ್ಗಳು ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದನ್ನು ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಎನ್ನಲಾಗುತ್ತದೆ. ಇದನ್ನು ಈಗಲೇ ಸರಿಯಾಗಿ ನಿರ್ವಹಿಸದಿದ್ದರೆ 2050ರ ಸುಮಾರಿಗೆ 1 ಕೋಟಿ ಮಂದಿ ಇದರ ಅಪಾಯ ಎದುರಿಸಬೇಕಾಗುತ್ತದೆ ಎಂಬ ಅಂದಾಜಿಸಲಾಗಿದೆ. (ಏಜೆನ್ಸೀಸ್)