ಇಂಧನ ಬಳಕೆ ಮಿತಿಮೀರಿದರೆ ಆಪತ್ತು

28-ANP-P1
ಆನಂದಪುರ ಸಮೀಪದ ಇರುವಕ್ಕಿ ವಿವಿಯಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ ಮತ್ತು ವನಮಹೋತ್ಸವವನ್ನು ಕುಲಪತಿ ಡಾ. ಆರ್.ಸಿ.ಜಗದೀಶ್ ಉದ್ಘಾಟಿಸಿದರು. ಡಾ. ಕೆ.ಸಿ.ಶಶಿಧರ, ಡಾ. ಎಸ್.ಯು.ಪಾಟೀಲ್, ಡಾ. ನಾರಾಯಣ ಮಾವರ್ಕರ್ ಇತರರಿದ್ದರು.
Published on

ಆನಂದಪುರ: ನವೀಕರಿಸಲಾಗದ ಇಂಧನದ ಮಿತಿಮೀರಿದ ಬಳಕೆ ಆತಂಕಕಾರಿ. ಇದರಿಂದ ಇಂಧನ ಕೊರತೆ ಎದುರಾಗಿ ಅನೇಕ ಸವಾಲುಗಳು ಎದುರಾಗಲಿವೆ. ಹಿಂದೆ ಬಳಕೆಯಲ್ಲಿದ್ದ ಎತ್ತಿನಗಾಡಿ, ಕುದುರೆಗಾಡಿ ವ್ಯವಸ್ಥೆ ಮರುಕಳಿಸಿದರೂ ಆಶ್ಚರ್ಯವಿಲ್ಲ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಹೇಳಿದರು.

ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಮತ್ತು ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನವೀಕರಿಸಲಾಗದ ಪೆಟ್ರೋಲಿಯಂ ಉತ್ಪನ್ನಗಳು ಭೂಮಿಯಲ್ಲಿ ಪರಿಮಿತವಾಗಿವೆ. ಬಳಕೆಯ ಪ್ರತಿ ಹಂತದಲ್ಲೂ ಭವಿಷ್ಯದ ಬದುಕಿನ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಇವುಗಳ ಕೊರತೆ ಎದುರಾದರೆ ಮತ್ತೆ ದೊರೆಯದು. ಅದಕ್ಕಾಗಿ ನವೀಕರಿಸಬಹುದಾದ ಸೌರ ವಿದ್ಯುತ್, ಬಯೋಡೀಸೆಲ್ ಬಳಕೆ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ವಿವಿ ಆವರಣದಲ್ಲಿ ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷ ಜೈವಿಕ ಇಂಧನ ಗಿಡ ನೆಡುವ ಗುರಿ ಇದೆ. ವನಮಹೋತ್ಸವ ನಡೆಸುವ ಜತೆಗೆ ವರ್ಷಪೂರ್ತಿ ಅವುಗಳನ್ನು ಸಂರಕ್ಷಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು.
ಜೈವಿಕ ಇಂಧನ ತಯಾರಿಕೆ ಮತ್ತು ಬಳಕೆ ವಿಧಾನಗಳ ಬಗ್ಗೆ ಜೈವಿಕ ಇಂಧನ ಯೋಜನೆ ಪ್ರಧಾನ ಸಂಶೋಧಕ ಡಾ. ಎಚ್.ಎಂ.ಹೊನ್ನಪ್ಪ ತಿಳಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಕೃಷಿ ಸಖಿಯರು ಆಗಮಿಸಿದ್ದರು. ಕುಲಸಚಿವ ಡಾ. ಕೆ.ಸಿ.ಶಶಿಧರ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಎಸ್.ಯು.ಪಾಟೀಲ್, ಡಾ. ನಾರಾಯಣ ಮಾವರ್ಕರ್, ವಿವಿ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net