

ಬೆಂಗಳೂರು: ಮಳೆ ಅಭಾವದಿಂದ ರಾಜ್ಯದಲ್ಲಿ ಗರಿಷ್ಠ ಅವಧಿಯ ವಿದ್ಯುತ್ ಬೇಡಿಕೆ 16,500 ಮೆಗಾ ವಾಟ್ ತಲುಪಿದೆ. ಮುಂದಿನ ೆಬ್ರವರಿ-ಏಪ್ರಿಲ್ ವೇಳೆಗೆ 18,500 ಮೆ.ವಾಟ್ ದಾಟುವ ಅಂದಾಜಿದ್ದು, ಬೇಸಿಗೆ ವಿದ್ಯುತ್ ಬೇಡಿಕೆ ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ ನೀಡಿದರು.
ಬೆಸ್ಕಾಂ ‘ಬೆಳಕು ಭವನ’ದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.50ರಷ್ಟು ವಿದ್ಯುತ್ ಬಳಕೆ ಹಾಗೂ ಬೇಡಿಕೆ ಹೆಚ್ಚಿದೆ. ವಿದ್ಯುತ್ ವಿನಿಮಯ, ಖರೀದಿ, ಶಾಖೋತ್ಪನ್ನ ಘಟಕಗಳ ವಾರ್ಷಿಕ ನಿರ್ವಹಣೆ ಕೈಬಿಟ್ಟು ಉತ್ಪಾದನೆ ಇತ್ಯಾದಿ ಕ್ರಮಗಳಿಂದ ಸರಿದೂಗಿಸಲಾಗುತ್ತಿದೆ.
ರಾಜ್ಯದ ಯಾವುದೇ ಭಾಗದಲ್ಲಿ ವಿದ್ಯುತ್ ಅಭಾವ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕೃಷಿ ಪಂಪ್‌ಸೆಟ್‌ಗಳಿಗೆ ಏಳು ತಾಸು ಮೂರು ೇಸ್ ವಿದ್ಯುತ್ ಪೂರೈಕೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಕೂಡಗಿ ಸ್ಥಾವರದ 150 ಮೆ.ವಾ. ಡಿಸೆಂಬರ್ 1ರಿಂದ ಲಭಿಸಲಿದೆ. ವಿನಿಮಯದಡಿ ಪಂಜಾಬ್ 300 ಮೆ.ವಾ., ಉತ್ತರಪ್ರದೇಶ 100 ರಿಂದ 600 ಮೆ.ವಾ. ಪಡೆದುಕೊಳ್ಳಲಾಗುವುದು.
ಶಾಖೋತ್ಪನ್ನ ನೆಲೆಯ ವಿದ್ಯುತ್ ಕೇಂದ್ರಗಳ ಒಟ್ಟು ಉತ್ಪಾದನೆ 3,500 ಮೆ.ವಾ.ಗೆ ಹೆಚ್ಚಿಸುವ ಗುರಿಯಿದೆ. ಅಧಿಕ ದಹನ ಶಕ್ತಿಯುಳ್ಳ ವಿದೇಶಿ ಕಲ್ಲಿದ್ದಲು ಬೆರೆಸಿದರೆ ಹೆಚ್ಚುವರಿ 600 ರಿಂದ 700 ಮೆ.ವಾ. ಲಭ್ಯವಾಗುವ ನಿರೀಕ್ಷೆಯಿದೆ.
ಟೆಂಡರ್‌ನಲ್ಲಿ ಅರ್ಹ ಪೂರೈಕೆ ಏಜನ್ಸಿಗಳಿಂದ ಒಟ್ಟು 2.50 ಲಕ್ಷ ಟನ್ ವಿದೇಶಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ನಿರ್ಧರಿಸಿ, ಪ್ರತಿ ಟನ್‌ಗೆ 80 ಡಾಲರ್ (6,659.96 ರೂ.)ನಂತೆ ಪೂರೈಕೆ ಕಾರ್ಯಾದೇಶ ಹೊರಡಿಸಲಾಗಿದೆ.
ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ಸೂಚನೆ ಪ್ರಕಾರ ದೇಶಿ ಕಲ್ಲಿದ್ದಲು ಜತೆಗೆ ಶೇ.6ರಷ್ಟು ವಿದೇಶಿ ಕಲ್ಲಿದ್ದಲು ಮಿಶ್ರಣ ಮಾಡಿ ವಿದ್ಯುತ್ ಉತ್ಪಾದಿಸಲು ಅವಕಾಶವಿದೆ. ಜತೆಗೆ ಅಕ್ಟೋಬರ್‌ನಿಂದ ಮಾಸಿಕ ಎರಡು ಲಕ್ಷ ಟನ್ ಕಲ್ಲಿದ್ದಲು ಹೆಚ್ಚುವರಿಯಾಗಿ ಲಭಿಸುತ್ತಿದೆ.
ಕೆಇಆರ್‌ಸಿ ಒಪ್ಪಿಗೆ ಪಡೆದು ಬೇಡಿಕೆ ಆಧರಿಸಿ ಅಲ್ಪಾವಧಿಗೆ 1,500 ಮೆ.ವಾ. ವಿದ್ಯುತ್ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ವಿದ್ಯುತ್ ಕಾಯ್ದೆ ಸೆಕ್ಷನ್ 11 ಜಾರಿಯಿಂದ ಸದ್ಯಕ್ಕೆ 600 ಮೆ.ವಾ. ಖಾಸಗಿ ಉತ್ಪಾದಕರಿಂದ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಒಂದು ಸಾವಿರ ಮೆ.ವಾ.ಗೆ ತಲುಪಲಿದೆ.
ಕೇಂದ್ರೀಯ ವಿದ್ಯುತ್ ಸ್ಥಾವರಗಳಿಂದ ಒಟ್ಟು 600 ಮೆ.ವಾ. ಹೆಚ್ಚುವರಿ ವಿದ್ಯುತ್ ಪೂರೈಕೆಗೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ 18,500 ಮೆ.ವಾ., ಬಳಕೆ 310 ದಶಲಕ್ಷ ಯೂನಿಟ್ ಮೀರಿದರೂ ಸಮಸ್ಯೆಯಾಗದಂತೆ ಅಲ್ಪಾವಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಯಲಹಂಕ ಸಂಯುಕ್ತ ವಿದ್ಯುತ್ ಸ್ಥಾವರ 370 ಮೆ.ವಾ. ಸಾಮರ್ಥ್ಯ ಹೊಂದಿದ್ದು, ಇನ್ನೆರಡು ತಿಂಗಳಲ್ಲಿ ಕಾರ್ಯಾರಂಭಿಸಲಿದೆ. ಭಾರತೀಯ ಅನಿಲ ಪ್ರಾಧಿಕಾರದ ಜತೆಗೆ ಅನಿಲ ಪೂರೈಕೆ ದರ, ಪ್ರಮಾಣದ ಬಗ್ಗೆ ಮಾತುಕತೆ ಪ್ರಗತಿಯಲ್ಲಿದೆ.
ಅಲ್ಲದೆ, ಯಂತ್ರೋಪಕರಣಗಳ ಸುಸ್ಥಿತಿ ಬಗ್ಗೆ ಬಿಎಚ್‌ಇಎಲ್ ಹಾಗೂ ಜಿಇ ಕಂಪನಿಗಳು ಅವಲೋಕಿಸಲಿವೆ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ವಿವರಿಸಿದರು.