

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಆತನ ಪತ್ನಿ ಮೆಲಾನಿಯಾ ಟ್ರಂಪ್ ಫೆ.24ಮತ್ತು 25ರಂದು ಭಾರತಕ್ಕೆ ಬರಲಿದ್ದು ಅದಕ್ಕೆ ಭಾರತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಟ್ರಂಪ್ ಅಹಮದಾಬಾದ್ನ ಮೊಟೆರಾದಲ್ಲಿರುವ ನಿರ್ಮಿಸಲಾಗಿರುವ ನೂತನ ಕ್ರೀಡಾಂಗಣವೊಂದನ್ನು ಉದ್ಘಾಟನೆ ಮಾಡಲಿದ್ದು ಕಾರ್ಯಕ್ರಮಕ್ಕೆ ಬರುವ ಅತಿಥಿಗಳನ್ನು ಹೊರತುಪಡಿಸಿ ಬೇರೆಲ್ಲರೂ 1.5 ಕಿ.ಮೀ ದೂರ ನಡೆಯಬೇಕಾಗುತ್ತದೆ ಎನ್ನಲಾಗಿದೆ.
ಮೊಟೆರಾ ಕ್ರೀಡಾಂಗಣದಲ್ಲಿ ಸುಮಾರು 1.2 ಲಕ್ಷ ಜನರು ಕುಳಿತುಕೊಂಡು ಕಾರ್ಯಕ್ರಮವನ್ನು ವೀಕ್ಷಿಸಲು ಸಿದ್ಧತೆ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್ಗೆ ಸುತ್ತಲಿನ 1.5 ಕಿ.ಮೀ ವಿಸ್ತಾರದ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಬರುವ ಅತಿಥಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಅತಿಥಿಗಳನ್ನು ಹೊರತು ಪಡಿಸಿ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರೆಲ್ಲರೂ 1.5 ಕಿ.ಮೀ. ದೂರ ನಡೆದು ಕಾರ್ಯಕ್ರಮಕ್ಕೆ ಹಾಜರಾಗಬೇಕಾಗುತ್ತದೆ.
ಅಹಮದಾಬಾದ್ನ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ ಮತ್ತು ಟ್ರಂಪ್ ಅಲ್ಲಿಂದ ಸಬರಮತಿ ಆಶ್ರಮಕ್ಕೆ ತೆರಳಲಿದ್ದು ಅಲ್ಲಿಂದ ಕ್ರೀಡಾಂಗಣದವರೆಗೆ ರೋಡ್ ಶೋ ಮೂಲಕ ತೆರಳಲಿದ್ದಾರೆ. 22 ಕಿ.ಮೀ. ರೋಡ್ ಶೋಗೆ ವ್ಯವಸ್ಥೆ ಮಾಡಲಾಗಿದ್ದು, 11,000 ಪೊಲೀಸರನ್ನು ಸುರಕ್ಷತೆಗೆ ನೇಮಿಸಲಾಗಿದೆ. (ಏಜೆನ್ಸೀಸ್)