

ಬೆಂಗಳೂರು: 2024-25ನೇ ಸಾಲಿನ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಿ ಭರ್ತಿ ಮಾಡುವ ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು (ಸಿಆರ್‌ಪಿ), ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಬಿಆರ್‌ಪಿ), ತಾಂತ್ರಿಕ ಸಹಾಯಕ (ಪ್ರಾಥಮಿಕ), ಶಿಕ್ಷಣ ಸಂಯೋಜಕ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ವರ್ಗಾವಣೆ ನಿಯಮಾನುಸಾರ ಶಾಲೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಗೊಳಿಸಲಾಗುತ್ತದೆ ಶಾಲಾ ಶಿಕ್ಷಣ ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಲಿಖಿತ ಪರೀಕ್ಷೆ1 ಮತ್ತು 2 ಅನ್ನು ತಲಾ 85 ಅಂಕಗಳಿಗೆ, ಅಭ್ಯರ್ಥಿಗಳ ಹೆಚ್ಚಿನ ವಿದ್ಯಾರ್ಹತೆಗೆ 20 ಅಂಕಗಳು ಮತ್ತು ಸೇವಾ ಅನುಭವಕ್ಕೆ 10 ಅಂಕಗಳು ಸೇರಿ ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮೇ 26ರವರೆಗೆ ಅರ್ಜಿ ಸಲ್ಲಿಸಬಹುದು. ಜೂ.8ರಿಂದ 10ರವರೆಗೆ ಪರೀಕ್ಷೆ ನಡೆಸಲಾಗುತ್ತದೆ.