ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಪರಿಷ್ಕೃತ ಸುತ್ತೋಲೆ ಹೊರಡಿಸಿದ ಪರೀಕ್ಷಾ ಮಂಡಳಿ: ಏನೆಲ್ಲ ಬದಲಾವಣೆಯಾಗಿದೆ? ಇಲ್ಲಿದೆ ಮಾಹಿತಿ

exam_20240419001248678.jpg
Published on

ಬೆಂಗಳೂರು ಗ್ರಾಮೀಣ ಭಾಗದಲ್ಲಿ ದ್ವಿತೀಯ ಪಿಯುಸಿಗೆ ಒಂದೇ ಪ್ರಾಯೋಗಿಕ ಪರೀಕ್ಷಾ ಕೇಂದ್ರವಿದ್ದಲ್ಲಿ ಆ ಕಾಲೇಜಿನ ವಿದ್ಯಾರ್ಥಿಗಳನ್ನು ಅದೇ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ವಿದ್ಯಾರ್ಥಿಗಳನ್ನು ಅದೇ ಸ್ಥಳದ ಸಮೀಪದ ಪರೀಕ್ಷಾ ಕೇಂದ್ರಗಳಿಗೆ ಟ್ಯಾಗ್ ಮಾಡಲಾಗುವುದು ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸ್ಪಷ್ಟಪಡಿಸಿದೆ.

ಲಿಖಿತ ಪರೀಕ್ಷೆ ಮಾದರಿಯಲ್ಲಿಯೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಿ ಪರೀಕ್ಷಾ ಮಂಡಳಿಯು ಹೊರಡಿಸಿದ್ದ ಸುತ್ತೋಲೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.

ಪ್ರಾಯೋಗಿಕ ಕೇಂದ್ರವಿರುವ ಕಾಲೇಜಿನ ವಿದ್ಯಾರ್ಥಿಗಳು ಅದೇ ಕಾಲೇಜಿನಲ್ಲಿ ಪ್ರಾಯೋಗಿಕ ಪರೀಕ್ಷೆ ಬರಯಲು ಅವಕಾಶ ಇರುವುದಿಲ್ಲ ಎಂನ ಸೂಚನೆ ನೀಡಲಾಗಿತ್ತು. ಇದಕ್ಕೆ ಪೂರಕವಾಗಿ ಕೆಲವು ಮಾರ್ಪಾಡುಗಳನ್ನು ಮಾಡಿದೆ.

ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಅಲ್ಲಿನ ಮೂಲಸೌಕರ್ಯದ ಸಾಮರ್ಥ್ಯದ ಮೇಲೆ ಹಂಚಿಕೆ ಮಾಡಲಾಗುವುದು ಮತ್ತು ಆ ಕೇಂದ್ರದಲ್ಲಿನ ಎಲ್ಲ ವಿದ್ಯಾರ್ಥಿಗಳು ಬೇರೆ ಕಾಲೇಜಿನವರಾಗಿರುತ್ತಾರೆ.

ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಟ್ಯಾಗ್ ಮಾಡಿರುವ ಕಾಲೇಜಿನ ವಿದ್ಯಾರ್ಥಿಗಳು ಈಗಾಗಲೇ ತಮ್ಮದಲ್ಲದ ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ಈ ಹಿಂದಿನಿಂದಲೂ ಬರೆಯುತ್ತಾ ಬಂದಿದ್ದಾರೆ. ಆದ್ದರಿಂದ ಪ್ರಾಯೋಗಿಕ ಕೇಂದ್ರವಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಸಮೀಪದ ಕಾಲೇಜಿಗೆ ಟ್ಯಾಗ್ ಮಾಡಬೇಕು. ಇದರಿಂದ ಹೊಸ ಪರೀಕ್ಷಾ ಕೇಂದ್ರದಲ್ಲಿ ಎಲ್ಲ ವಿದ್ಯಾರ್ಥಿಗಳು ಏಕರೂಪದ ವಾತಾವರಣದಲ್ಲಿ ಪರೀಕ್ಷೆ ಬರೆಯುವಂತಾಗುತ್ತದೆ.

ಟ್ಯಾಗ್ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಅವರ ಕಾಲೇಜಿನ ಉಪನ್ಯಾಸಕರು ಆಂತರಿಕ ಪರೀಕ್ಷಕರಾಗಿರುತ್ತಾರೆ. ಆದ್ದರಿಂದ ಹೊಸ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆತಂಕ ಉಂಟಾಗದಂತೆ ಉಪನ್ಯಾಸಕರು ಗಮನ ಹರಿಸಬೇಕು ಎಂಬ ಸೂಚನೆ ನೀಡಿದೆ.

ಪ್ರಾಯೋಗಿಕ ಪರೀಕ್ಷೆಗೆ ವಿದ್ಯಾರ್ಥಿಯು ಉತ್ತರಿಸುವ ಪ್ರತಿ ವಿಷಯಕ್ಕೆ 9.60 ರೂ. ವೆಚ್ಚವನ್ನು ಮಂಡಳಿ ವತಿಯಿಂದ ಭರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಯೋಗಾಲಯಗಳಿಗೆ ಬೇಕಾಗುವ ಪರಿಕರಗಳನ್ನು ಈ ಮೊತ್ತದಿಂದ ಖರೀದಿಸಬಹುದಾಗಿದೆ. ಪ್ರಯೋಗಾಲಯಗಳನ್ನು ಸುಸಜ್ಜಿತವಾಗಿಡಬೇಕು. ಈ ಸಂಬಂಧ ಈಗಿನಿಂದಲೇ ಕಾರ್ಯಪ್ರವೃತ್ತರಾಗುವಂತೆ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದೆ.

ಪ್ರತಿ ಉಪನ್ಯಾಸಕರು ಗರಿಷ್ಠ 4 ದಿನಗಳು ಮಾತ್ರ ಆಂತರಿಕ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ. ಈಗಾಗಲೇ ಉಪನ್ಯಾಸಕರ ನೊಂದಣಿಗೆ ಪಿಯು ಎಕ್ಸಾಂ ಪೋರ್ಟಲ್‌ನಲ್ಲಿ ಲಾಗಿನ್ ಚಾಲ್ತಿಯಲ್ಲಿದ್ದು ಉಪನ್ಯಾಸಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ನೋಂದಣಿಯಾಗದ ಉಪನ್ಯಾಸಕರು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿಲ್ಲ ಎಂದು ಮಂಡಳಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net