ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ ವಿರೂಪಾಕ್ಷಪ್ಪ! ಮಸ್ಕಿ ಬೈ ಎಲೆಕ್ಷನ್​ ಭರ್ಜರಿ ಸಿದ್ಧತೆ

WhatsApp Image 2021-03-09 at 11.37.54 AM
Published on

ಬೆಂಗಳೂರು: ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಕಾಂಗ್ರೆಸ್ ತೊರೆದು ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ವಿರೂಪಾಕ್ಷಪ್ಪಗೆ ಪಕ್ಷದ ಬಾವುಟ ಕೊಟ್ಟು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬರಮಾಡಿಕೊಂಡರು.

ಸಿಂಧನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ವಿರೂಪಾಕ್ಷಪ್ಪ, ಟಿಕೆಟ್​ ಕೈತಪ್ಪಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಕುರುಬ ಸಮಾಜದ ಪ್ರಭಾವಿ ಮುಖಂಡ ಎಂದು ಗುರುತಿಸಿಕೊಂಡಿರುವ ಇವರು ಕುರುಬರ ಎಸ್ಟಿ ಮೀಸಲಾತಿಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ. ಕಾಂಗ್ರೆಸ್​ನಿಂದ ಕೊಪ್ಪಳ ಲೋಕಸಭೆಗೆ 2004ರಲ್ಲಿ ಹಾಗೂ ಸಿಂಧನೂರಿನಲ್ಲಿ 1998ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ವಿರುಪಾಕ್ಷಪ್ಪ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಪ್ರಭಾವಿ ನಾಯಕ. ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ವಿರೂಪಾಕ್ಷಪ್ಪ ಅವರನ್ನ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಮಸ್ಕಿಯಲ್ಲಿ ವಾಲ್ಮೀಕಿ ನಾಯಕ, ಲಿಂಗಾಯತರ ನಂತರ ಕುರುಬ ಸಮುದಾಯದ ಮತಗಳೇ ಅಧಿಕ.

ಪಕ್ಷಕ್ಕೆ ವಿರೂಪಾಕ್ಷಪ್ಪರನ್ನು ಬರಮಾಡಿಕೊಂಡ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ,ವಿರೂಪಾಕ್ಷಪ್ಪ ಈ ಹಿಂದೆ ನಮ್ಮ ಜೊತೆಗೆ ಇದ್ದರು. ಆದರೆ ಯಾವುದೋ ಕಾರಣಕ್ಕೆ ನಮ್ಮಿಂದ ದೂರ ಆಗಿದ್ರು. ಇವಾಗ ಮತ್ತೊಮ್ಮೆ ಬಿಜೆಪಿ ಸೇರುತ್ತಿರೋದು, ಅವರ ಸುತ್ತಲಿನ ನಾಲ್ಕೈದು ಜಿಲ್ಲೆಗಳಿಗೆ ಆನೆಯ ಬಲ ಬಂದಂತಾಗಿದೆ. ಈ ತಿಂಗಳ 20ನೇ ತಾರೀಖು ಮಸ್ಕಿಯಲ್ಲಿ ವಿರೂಪಾಕ್ಷಪ್ಪ ಅವ್ರು ಸಾವಿರಾರು ಜನರ ಜೊತೆಗೂಡಿ ಸಭೆ ಮಾಡ್ತಾರೆ. ನಾನು ಹೆಲಿಕಾಪ್ಟರ್​ನಲ್ಲಿ ಹೋಗಿ ಆ ಸಮಾವೇಶಕ್ಕೆ ಬರ್ತೇನೆ. ವಿರೂಪಾಕ್ಷಪ್ಪ ಜೊತೆಗೂಡಿ ಅವರ ಬೆಂಬಲಿಗರು ಪಕ್ಷ ಸೇರಿದ್ದಾರೆ. ವಿರೂಪಾಕ್ಷಪ್ಪ ನಮ್ಮ ಜೊತೆ ಸೇರಬೇಕು ಎಂದು ನಮಗೆ ಅಪೇಕ್ಷೆ ಇತ್ತು. ಅದರಂತೆ ಇವತ್ತು ಅವರು ಪಕ್ಷ ಸೇರಿದ್ದಾರೆ ಎಂದರು.

ವಿರೂಪಾಕ್ಷಪ್ಪ ಮಾತನಾಡಿ, ಅನಿವಾರ್ಯ ಕಾರಣಗಳಿಂದ ಪಕ್ಷ ಬಿಡಬೇಕಾಗಿತ್ತು. ನುಡಿದಂತೆ ನಡೆಯುವ ವ್ಯಕ್ತಿ ಅಂದ್ರೆ ಅದು ಬಿಎಸ್ವೈ ಎಂದರು.

ಸಚಿವ ಈಶ್ವರಪ್ಪ ಮಾತನಾಡಿ, ವಿರೂಪಾಕ್ಷಪ್ಪ ಇಡೀ ರಾಜ್ಯಾದ್ಯಂತ ಎಲ್ಲ ವರ್ಗದ ಜನರನ್ನ ಒಗ್ಗೂಡಿಸೋ ಕೆಲ್ಸ ಮಾಡಿದ್ದಾರೆ ಎಂದು ಬಣ್ಣಿಸಿದರು. ಸಂಸದ ಕರಡಿ ಸಂಗಣ್ಣ, ರವಿಕುಮಾರ್, ವಿಜಯೇಂದ್ರ ಸೇರಿ ಹಲವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net