

ಮೈಸೂರು: ನಮ್ಮ ಸಮುದಾಯಕ್ಕೆ ಸರಸ್ವತಿ ಒಲಿದಿದ್ದಾಳೆ, ಆದರೆ ಲಕ್ಷ್ಮೀ ಒಲಿಯಲಿಲ್ಲ ಎನ್ನುತ್ತಲೇ ಮಾಜಿ ಎಂಎಲ್‌ಸಿ ರಘು ಆಚಾರ್ ಅವರು ಸಿದ್ದರಾಮಯ್ಯರನ್ನು ಗುಣಗಾನ ಮಾಡಿದರು. ನಾನು ಮತ್ತು ಕೆ.ಪಿ.ನಂಜುಂಡಿ ಅವರು ವಿಧಾನಸೌಧಕ್ಕೆ ಹೋಗುವುದು ಮುಖ್ಯವಲ್ಲ. ಸಿದ್ದರಾಮಯ್ಯ ಅವರಂತಹ ನಾಯಕರು ವಿಧಾನಸಭೆಗೆ ಹೋಗಬೇಕು ಎಂದರು.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣದಲ್ಲಿ ಶ್ರೀ ವಿಶ್ವಕರ್ಮ ಜಯಂತ್ಯುತ್ಸವ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರಘು ಆಚಾರ್, ಡಿ.ದೇವರಾಜ ಅರಸು ನಂತರ ಸಣ್ಣಪುಟ್ಟ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿದವರು ಸಿದ್ದರಾಮಯ್ಯ. ಫ್ಯೂಚರ್ ಮುಖ್ಯಮಂತ್ರಿಗಳು ಸಿದ್ದರಾಮಯ್ಯ. ಕೆಲವರು ರಾಜಕೀಯಕ್ಕೆ ಭಾಷಣ ಮಾಡುತ್ತಾರೆ. ನಾನು ಮನಸಾರೆ ಮಾತನಾಡುತ್ತಿದ್ದೇನೆ, ಮುಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ. ನಾನು ವಿಧಾನಸಭೆಗೆ ಹೋಗಬೇಕು ಅನ್ನೋದು ನನಗೆ ಮುಖ್ಯವಲ್ಲ. ಸಣ್ಣಪುಟ್ಟ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಡಿ, ನಮ್ಮೊಂದಿಗೆ ಅತಿ ಸಣ್ಣ ಸಮುದಾಯಗಳನ್ನು ಸೇರಿಸಿಕೊಂಡರೆ ಗೆಲ್ಲಬಹುದು ಎಂದು ವೇದಿಕೆಯಲ್ಲೇ ಸಿದ್ದರಾಮಯ್ಯಗೆ ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಮಾತನಾಡಿ, ನಾವು ದೇವರನ್ನು ನೋಡಿಲ್ಲ. ಆದರೆ ದೇವರಿಗೆ ರೂಪ ಕೊಟ್ಟಿದ್ದು ವಿಶ್ವಕರ್ಮ ಸಮುದಾಯ. ವಿಶ್ವಕರ್ಮ ಸಮುದಾಯಕ್ಕೆ ಕಲ್ಪನಾ ಶಕ್ತಿ ಇದೆ. ಶಿವ, ಕೃಷ್ಣನ ಮೂರ್ತಿಗಳನ್ನು ಕೆತ್ತಿ ಇದೇ ದೇವರ ರೂಪ ಎಂದು ತೋರಿಸಿಕೊಟ್ಟಿದ್ದು ವಿಶ್ವಕರ್ಮ ಸಮುದಾಯ. ರೈತರೊಂದಿಗೆ ಒಡನಾಡಿಯಾಗಿ ಕೆಲಸ ಮಾಡಿದ ಸಮುದಾಯ. ನೇಗಿಲು, ನೊಗ, ಗುದ್ದಲಿ ಮಾಡಿಕೊಡುವವರು ವಿಶ್ವಕರ್ಮ ಸಮುದಾಯದವರು. ವಿಶ್ವಕರ್ಮ ಸಮುದಾಯ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗವಾಗಿದೆ. ಅವರ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕು ಎಂದರು.
ವಿಶ್ವಕರ್ಮ ಪೀಠಾಧ್ಯಕ್ಷ ಶ್ರೀ ಅನಂತ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕ ಅನಿಲ್ ಚಿಕ್ಕಮಾದು, ಎಂಎಲ್‌ಸಿ ಡಾ.ತಿಮ್ಮಯ್ಯ, ಸಮುದಾಯದ ಮುಖಂಡರಾದ ಕೆ.ಪಿ.ನಂಜುಂಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.