

Kannan Gopinathan: 2019ರಲ್ಲಿ ಜಮ್ಮು-ಕಾಶ್ಮೀರದ ವಿಶೇಷ 370ನೇ ವಿಧಿ ರದ್ದುಗೊಳಿಸಿದ್ದನ್ನು ವಿರೋಧಿಸಿದ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಕೇರಳದ ಮೂಲದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಇಂದು(ಅ. 13) ದೆಹಲಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಣ್ಣನ್ ಗೋಪಿನಾಥನ್ ಅವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ವೇಳೆ ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ನಾಯಕರಾದ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ ಹಾಗೂ ಮಾಜಿ ಐಎಎಸ್ ಅಧಿಕಾರಿ, ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ ಅವರ ಹಾಜರಿದ್ದರು.
ಈ ವೇಳೆ ಮಾತನಾಡಿರುವ ಕೆ.ಸಿ.ವೇಣುಗೋಪಾಲ್, ಗೋಪಿನಾಥನ್ ದೇಶದ ದೀನದಲಿತ ಮತ್ತು ಅಂಚಿನಲ್ಲಿರುವ ಜನರ ಬಗ್ಗೆ ಉತ್ಸಾಹ ಹೊಂದಿರುವ, ಯಾವಾಗಲೂ ನ್ಯಾಯ ಮತ್ತು ಏಕತೆಗಾಗಿ ಹೋರಾಡುವ ಧೈರ್ಯಶಾಲಿ ಅಧಿಕಾರಿಗಳಲ್ಲಿ ಒಬ್ಬರು. ಅವರು ಕೇರಳದಲ್ಲಿ ಜನಿಸಿದ್ರು, ಈಶಾನ್ಯ ಮತ್ತು ದೇಶದ ಇತರ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಗೋಪಿನಾಥನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ವಿಭಜಕ ಕಾರ್ಯಸೂಚಿಯ ವಿರುದ್ಧ ಹೋರಾಡಲು ಇದು ಸರಿಯಾದ ಸಮಯ. ಇಂದು ಅವರು ಕಾಂಗ್ರೆಸ್ ಪಕ್ಷಕ್ಕೆ ಪ್ರವೇಶಿಸಿರುವುದು ಸ್ವಾಗತಾರ್ಹ. ನಾವು ಅವರನ್ನು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಗೋಪಿನಾಥನ್ 2019ರಲ್ಲಿ ಅವರ ಹುದ್ದೆಗೆ ರಾಜೀನಾಮೆ ನೀಡಿದರು, ಆದರೆ ಅವರ ರಾಜೀನಾಮೆಯನ್ನು ಇನ್ನೂ ಅಂಗೀಕರಿಸಲಾಗಿಲ್ಲ. ನ್ಯಾಯಕ್ಕಾಗಿ ಮತ್ತು ಅಂಚಿನಲ್ಲಿರುವವರಿಗಾಗಿ ಹೋರಾಡುವ ಅಧಿಕಾರಿಗಳನ್ನು ಸರ್ಕಾರವು ಶಿಕ್ಷಿಸುತ್ತಿದೆ. ಈ ವಿದ್ಯಮಾನವು ಹರಿಯಾಣ ಮತ್ತು ಮಧ್ಯಪ್ರದೇಶ ಎರಡರಲ್ಲೂ ಸ್ಪಷ್ಟವಾಗಿದೆ. ಭಾರತದ ಮುಖ್ಯ ನ್ಯಾಯಾಧೀಶರು ಸಹ ಈ ದಾಳಿಗಳಿಂದ ಹೊರತಾಗಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಕಣ್ಣನ್ ಗೋಪಿನಾಥನ್, ಕೇಂದ್ರ ಸರ್ಕಾರ ಸರ್ಕಾರ ದೇಶವನ್ನು ತೆಗೆದುಕೊಂಡು ಹೋಗುತ್ತಿರುವ ದಿಕ್ಕು ತಪ್ಪಾಗಿದೆ. ಈ ತಪ್ಪಿನ ವಿರುದ್ಧ ನಾನು ಹೋರಾಡಬೇಕು ಎಂದು ತಿಳಿದಿತ್ತು. ಈ ಹಿನ್ನೆಲೆ 2019ರಲ್ಲಿ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ. ಈ ನಿರ್ಧಾರದ ಬಳಿಕ ನಾನು ದೇಶದ 80-90 ಜಿಲ್ಲೆಗಳಲ್ಲಿ ಸಂಚರಿಸಿದ್ದೇನೆ. ಜನರೊಂದಿಗೆ ಮಾತನಾಡಿದ್ದೇನೆ, ಹಲವಾರು ನಾಯಕರನ್ನು ಭೇಟಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷ ಮಾತ್ರ ಈ ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲದು ಎಂದು ಆಗಲೇ ನಾನು ಅರಿತುಕೊಂಡೆ ಎಂದು ಹೇಳಿದ್ದಾರೆ.
ದೇಶದಲ್ಲಿ ಈಗ ಪ್ರಶ್ನೆ ಕೇಳುವ ಯಾರನ್ನಾದರೂ ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟುವುದನ್ನು ನಾವು ನೋಡಿದ್ದೇವೆ. ಇಂದು ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ನನಗೆ ಸಂತೋಷವಾಗಿದೆ. ಪಕ್ಷವು ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಪೂರೈಸುತ್ತೇನೆ ಎಂದು ಇದೇ ವೇಳೆ ಹೇಳಿದ್ದಾರೆ. (ಏಜೆನ್ಸೀಸ್)