ವರದಿ ಸ್ವೀಕರಿಸಿ, ಇಲ್ಲ ಹೋರಾಟ ಎದುರಿಸಿ

Published on

* ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಟುರು * ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ವರದಿ ಸ್ವೀಕಾರಕ್ಕೆ ಆಗ್ರಹ

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕಾರ ಮಾಡಲು ಹಿಂದೇಟು ಹಾಕಿದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದರು.

ನಾನಿದ್ದಾಗ ವರದಿ ಕೊಡಲಿಲ್ಲ ನಾನು ಸಿಎಂ ಆಗಿದ್ದಾಗ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿ ಕೊಡಲಿಲ್ಲ. ಆಗ ಪೂರ್ಣವೂ ಆಗಿರಲಿಲ್ಲ. ಬಳಿಕ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆಗ ವರದಿ ಕೊಡಲು ಪ್ರಯತ್ನ ಮಾಡಿತಾದರೂ ಸ್ವೀಕಾರ ಮಾಡಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಸ್ವೀಕಾರ ಮಾಡುವುದರಿಲಿ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನೇ ವಜಾ ಮಾಡಿದರು. ಹೀಗಾಗಿ ಕಾಂತರಾಜ್ ಅವರು ಆಯೋಗದ ಕಾರ್ಯದರ್ಶಿಗೆ ವರದಿ ಸಲ್ಲಿಸಿದರು. ಈವರೆಗೆ ಪ್ರಯತ್ನ ಮಾಡಿದರೂ ಸರ್ಕಾರ ವರದಿಯನ್ನು ಸ್ವೀಕಾರ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕ ಮತ್ತು ಸಾಮಾಜಿಕ ಜನಗಣತಿ ಕೊನೆಯ ಬಾರಿಗೆ ಆಗಿದ್ದು 1931ರಲ್ಲಿ. ಮೀಸಲು ವಿಚಾರದಲ್ಲಿ ವಿಚಾರಣೆಗಳು ನಡೆದಾಗ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್​ಗಳು ಜಾತಿ ಮತ್ತು ಜನಗಣತಿ ಬಗ್ಗೆ ವರದಿ ಹಾಗೂ ದಾಖಲೆಗಳನ್ನು ಕೇಳುತ್ತಿದ್ದವು. ಸಮಗ್ರ ವರದಿಗಳೇ ನ್ಯಾಯಾಲಯಗಳಿಗೆ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಆಧಾರದ ಮೇಲೆ ಸಮೀಕ್ಷೆ ನಡೆಸುವ ನಿರ್ಧಾರವನ್ನು ನಾನು ಸಿಎಂ ಆಗಿದ್ದಾಗ ಕೈಗೊಂಡಿದ್ದೆ ಎಂದರು.

ದೇಶದಲ್ಲೆಲ್ಲೂ ಇಲ್ಲ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನಮ್ಮ ಸರ್ಕಾರ ಗಣತಿ ನಡೆಸುವ ಜವಾಬ್ದಾರಿ ವಹಿಸಿತು. ಆಗ ಹಿರಿಯ ನ್ಯಾಯವಾದಿ ಕಾಂತರಾಜ್ ಆಯೋಗದ ಅಧ್ಯಕ್ಷರಾಗಿದ್ದು. ಆಯೋಗ ಸುಮಾರು 1.88 ಲಕ್ಷ ಸಿಬ್ಬಂದಿಯನ್ನು ಗಣತಿಗೆ ಬಳಸಿಕೊಂಡಿತ್ತು. ಸಿಬ್ಬಂದಿ ನಗರ ಹಾಗೂ ಗ್ರಾಮೀಣ ಪ್ರದೇಶದ ಮನೆ ಮನೆಗೆ ಭೇಟಿ ನೀಡಿ, 55 ಅಂಶಗಳನ್ನು ಮುಂದಿಟ್ಟುಕೊಂಡು ಮಾಹಿತಿ ಸಂಗ್ರಹಿಸಿದ್ದರು. ಇದರ ಆಧಾರದ ಮೇಲೆ ಆಯೋಗ ಸಮಗ್ರ ವರದಿ ಸಿದ್ಧಪಡಿಸಿದೆ. ದೇಶದಲ್ಲಿ ಎಲ್ಲಿಯೂ ಈ ರೀತಿಯ ವರದಿಯನ್ನು ಸಿದ್ಧಪಡಿಸಿಲ್ಲ. ಇದಕ್ಕಾಗಿ 162.77 ಕೋಟಿ ರೂ. ಖರ್ಚು ಮಾಡಲಾಗಿತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.

ಎಸ್​ಸಿಇಪಿ-ಟಿಎಸ್​ಪಿ ಜಾರಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಈ ಹಿಂದೆ ಅವರ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರಲಿಲ್ಲ. ಹೀಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಎಸ್​ಸಿಇಪಿ-ಟಿಎಸ್​ಪಿ ಯೋಜನೆ ಜಾರಿಗೆ ತರಲಾಯಿತು. ಬೆಳಗಾವಿ ಅಧಿವೇಶನದಲ್ಲಿ ಈ ಸಂಬಂಧ ಕಾಯಿದೆಯನ್ನೂ ರೂಪಿಸಲಾಯಿತು. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ.17.15, ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ.6.95 ಇದೆ. ಒಟ್ಟು ಶೇ.24.1 ಪರಿಶಿಷ್ಟ ಜನರಿದ್ದಾರೆ. ಎಲ್ಲ ಜಾತಿಗಳ ಬಗ್ಗೆ ಮಾಹಿತಿ ಇದ್ದರೆ, ಈ ರೀತಿಯ ಕಾರ್ಯಕ್ರಮ ಜಾರಿಗೆ ತರಲು ಅನುಕೂಲವಾಗುತ್ತದೆ ಎಂದರು.

ಎಸ್​ಟಿ ಮೀಸಲು ಹೆಚ್ಚಳಕ್ಕೆ ವಿರೋಧವಿಲ್ಲ: ಪರಿಶಿಷ್ಟ ಪಂಗಡದ ಬಗ್ಗೆ ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿ ನೀಡಿದ್ದಾರೆ. ಎಸ್​ಟಿ ಸಮುದಾಯವರು ಮೀಸಲು ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ ಎಂದು ಹೇಳಿದರು.

ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಒಕ್ಕೂಟದ ಗೌರವ ಅಧ್ಯಕ್ಷ ಡಾ.ಬಿ.ಕೆ.ರವಿ, ಅಧ್ಯಕ್ಷರಾದ ಕೆ.ಎಂ.ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಸುರೇಶ್ ಲಾತೂರ್, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ ಸೇರಿ ವಿವಿಧ ಸಮುದಾಯಗಳ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net