

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಪ್ರಕರಣದಲ್ಲಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬೆಮಲ್) ಮಾಜಿ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಚೆನ್ನೈನ ವಿ.ಆರ್.ಎಸ್.ನಟರಾಜನ್ ಅವರನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಆರೋಪ ಮುಕ್ತಿ ಕೋರಿದ್ದ ಅರ್ಜಿ ವಜಾಗೊಳಿಸಿದ್ದನ್ನು ಪ್ರಶ್ನಿಸಿ ನಟರಾಜನ್ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಕುಟುಂಬ ಸದಸ್ಯರ ಸ್ವತಂತ್ರ ಆದಾಯ ಮೂಲವನ್ನು ಪರಿಗಣಿಸಬೇಕಿತ್ತು. ಆದರೆ, ಅದನ್ನು ಸಿಬಿಐ ಪರಿಗಣಿಸಿಲ್ಲ. ಸಿಬಿಐ ನಿರ್ಣಯಕ್ಕೆ ಬರಲು ಪರಿಶೀಲನಾ ವರದಿಯನ್ನು ಐದು ವರ್ಷಗಳ ಅವಧಿಗೆ ಮಿತಿಗೊಳಿಸಿ ಪರಿಗಣಿಸಿದ್ದರೂ ಎಫ್‌ಐಆರ್ ದಾಖಲಿಸುವಾಗ ಹತ್ತು ವರ್ಷದ ಅವಧಿಗೆ ಪರಿಗಣಿಸಲಾಗಿದೆ.
ಹತ್ತು ವರ್ಷಗಳ ಅವಧಿಯಲ್ಲಿ ನಟರಾಜನ್ ಅವರು ಆದಾಯ ಮೀರಿದ ಆಸ್ತಿ ಗಳಿಕೆ ಹೊಂದಿದ್ದಾರೆ ಎಂದು ತನಿಖಾಧಿಕಾರಿ ಮೊದಲಿಗೆ ನಿರ್ಧಾರಕ್ಕೆ ಬಂದು, ನಂತರ ಅದನ್ನು ಐದು ವರ್ಷಕ್ಕೆ ಮಿತಿಗೊಳಿಸಿ, ನಟರಾಜನ್ ಆ ಕೊನೆಯ ಐದು ವರ್ಷದ ಅವಧಿಯಲ್ಲಿ ಆದಾಯ ಮೀರಿದ ಆಸ್ತಿ ಹೊಂದಿದ್ದಾರೆ ಎಂಬ ನಿರ್ಣಯಕ್ಕೆ ಬಂದಿರುವುದು ಮೂಲ ವರದಿಯ (ಸೋರ್ಸ್ ರಿಪೋರ್ಟ್) ಅಸಲಿಯತ್ತಿನ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.