

ಹನಗೋಡು: ಅಸ್ಪಶ್ಯತೆ ನಿರ್ಮೂಲನೆ ಕೇವಲ ಕಾನೂನುನಿಂದಲೇ ಸಾಧ್ಯವಿಲ್ಲ. ಇದರ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಎಂ.ಮಂಜುನಾಥ್ ಅಭಿಪ್ರಾಯಪಟ್ಟರು.
ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜ್ಞಾನಜ್ಯೋತಿ ಸಂಸ್ಥೆ ಸಹಯೋಗದಲ್ಲಿ ಹನಗೋಡಿನಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಅಸ್ಪಶ್ಯತೆ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯರೆಲ್ಲ ಒಂದೇ ಎಂಬ ಮಾನವೀಯ ಜ್ಞಾನವಿದ್ದರೆ ಸಮಾಜದಲ್ಲಿ ಅಸ್ಪಶ್ಯತೆ ಪಿಡುಗನ್ನು ಹೋಗಲಾಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅತ್ಯಗತ್ಯ. ಅಲ್ಲದೆ ಈ ಬಗ್ಗೆ ಕಾನೂನನ್ನು ಎಲ್ಲರೂ ಅರಿಯಬೇಕು ಎಂಬ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ವಕೀಲ ಗುರುಪ್ರಸಾದ್ ವಿವಿಧ ಕಾಯ್ದೆಗಳ ಬಗ್ಗೆ ಮಾತನಾಡಿ, ಕೇಂದ್ರ-ರಾಜ್ಯ ಸರಕಾರಗಳು ಸಮಾಜ ಕಲ್ಯಾಣ ಇಲಾಖೆ ಮುಖಾಂತರ ಅಸ್ಪಶ್ಯತೆ ನಿವಾರಣೆಗೆ ಎಲ್ಲೆಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. 12ನೇ ಶತಮಾನದಲ್ಲೇ ಬಸವಣ್ಣನವರು ಜಾತಿ ಪದ್ಧತಿ ತೊಲಗಿಸಿ ಸಮ ಸಮಾಜ ನಿರ್ಮಿಸಲು ಅನುಭವ ಮಂಟಪ ಸ್ಥಾಪಿಸಿದ್ದರು. ಆದರೆ ಇಂದಿಗೂ ಅಸ್ಪಶ್ಯತೆ ಜೀವಂತವಾಗಿದೆ. ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಸಮಾಜ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಅಸ್ಪಶ್ಯತೆ ಹಾಗೂ ಮಾನವಹಕ್ಕು ಉಲ್ಲಂಘನೆಯಾದಲ್ಲಿ ದೊರೆಯುವ ಕಾನೂನು ನೆರವು, ಪರಿಹಾರದ ಹಾಗೂ ನ್ಯಾಯಾಲಯಗಳಲ್ಲಿ ಸಿಗುವ ಉಚಿತ ಕಾನೂನು ನೆರವಿನ ಕುರಿತು ಮಾಹಿತಿ ನೀಡಿದರು.
ಸಮಾಜ ಕಲ್ಯಾಣಾಧಿಕಾರಿ ಅಶೋಕ್‌ಕುಮಾರ್ ಕಾರ್ಯಕ್ರಮದ ಕರಿತು ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರೇಮ್‌ಕುಮಾರ್ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಉಪ ತಹಸೀಲ್ದಾರ್ ಚೆಲುವರಾಜು, ಹನಗೋಡು ಗ್ರಾಪಂ ಅಧ್ಯಕ್ಷ ಚೆನ್ನಯ್ಯ, ಕರ್ಣಕುಪ್ಪೆ ಗ್ರಾಪಂ ಅಧ್ಯಕ್ಷ ಪಾಪಣ್ಣ, ಜ್ಞಾನಜ್ಯೋತಿ ಸಂಸ್ಥೆಯ ಹೇಮಾವತಿ, ಉಪಪ್ರಾಚಾರ್ಯ ಸಂತೋಷ್‌ಕುಮಾರ್, ಉಪನ್ಯಾಸಕ ಗೋವಿಂದರಾಜು, ಇಸಿಒ ಕೇಶವಮೂರ್ತಿ, ಮುಖಂಡರಾದ ಕಿರಂಗೂರುಸ್ವಾಮಿ, ದೊಡ್ಡಹೆಜ್ಜೂರು ನಾಗೇಶ್, ಅಂಗನವಾಡಿ ಮೇಲ್ವಿಚಾರಕಿ ಸುಮಂಗಲಿ ಇತರರು ಮಾತನಾಡಿದರು.
ಗ್ರಾಪಂ ಸದಸ್ಯರಾದ ರತ್ನ ಶ್ರೀಧರ್, ಛಾಯಾ ನಾಗೇಗೌಡ, ಬೋರೇಗೌಡ, ಸಂಗೀತಾ, ಈಶ್ವರ್, ರವಿಕುಮಾರ್, ಆರ್.ಐ.ನಂದೀಶ್, ಗ್ರಾಮಆಡಳಿತಾಧಿಕಾರಿ ಕರಿಬಸವಯ್ಯ, ವಿವಿಧ ಗ್ರಾಪಂಗಳ ಪಿಡಿಒಗಳಾದ ಡಾ.ಅನಿತಾ, ಲೋಕೇಶ್, ಷಡಕ್ಷರಿ,ರವಿ, ದೇವರಾಜ್, ಮಂಜುನಾಥ್, ಮಂಜುಳಾ, ಶಿಕ್ಷಣ ಇಲಾಖೆಯ ಸಿಆರ್‌ಪಿಗಳು, ಮುಖ್ಯಶಿಕ್ಷಕರು, ಅಂಗನವಾಡಿ-ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
ಬೀದಿ ನಾಟಕ-ಜಾಥಾ: ಕಾರ್ಯಕ್ರಮಕ್ಕೂ ಮುನ್ನ ಗ್ರಾಪಂ ಆವರಣದಲ್ಲಿ ಅನಿಕೇತನ ಕಲಾ ತಂಡದವರು ಅಸ್ಪಶ್ಯತೆ ನಿರ್ಮೂಲನೆ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.